ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್​ ಮಂಗಳೂರು ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಉಡುಪಿ ವತಿಯಿಂದ ದ.ಕ. ಜಿಲ್ಲೆಯ 850 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ. ಎಂ.ಎನ್​. ರಾಜೇಂದ್ರಕುಮಾರ್​, ಯಶ್​ಪಾಲ್​ ಸುವರ್ಣ, ಕ್ಯಾ.ಬ್ರಿಜೇಶ್​ ಚೌಟ, ವೇದವ್ಯಾಸ ಕಾಮತ್​, ಕಿಶೋರ್​ಕುಮಾರ್​ ಪುತ್ತೂರು, ಲಕ್ಷ್ಮಣ ಕೋಡಿಕಲ್​, ಮೋಹನ್​ ಬೆಂಗ್ರೆ, ಗೌತಮ್​ ಕೋಡಿಕಲ್​, ಲೋಕೇಶ್​ ಸುವರ್ಣ, ದೇವಪ್ಪ ಕಾಂಚನ್​, ಶರತ್​ಕುಮಾರ್​ ಶೆಟ್ಟಿ ಎನ್​. ಇತರರಿದ್ದರು. 
ಉಡುಪಿ

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಶ್ರೇಷ್ಠ ಕಾರ್ಯ

* ಡಾ. ಎಂ.ಎನ್​. ರಾಜೇಂದ್ರಕುಮಾರ್​ ಅಭಿಪ್ರಾಯ 

* 850 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಡುಪಿ: ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆಯಲ್ಲಿ ಮೀನು ಮಾರಾಟ ಫೆಡರೇಷನ್​ ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಸಹಕಾರ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿದೆ. ಪ್ರತಿವರ್ಷವೂ ಸಂಸ್ಥೆಯು ಗಳಿಸಿದ ಲಾಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಆ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ. ಅವರ ಶೈಕ್ಷಣಿಕ ಕಾಳಜಿ ಅಭಿನಂದನಾರ್ಹ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಅಧ್ಯಕ್ಷ ಡಾ. ಎಂ.ಎನ್​. ರಾಜೇಂದ್ರ ಕುಮಾರ್​ ಶ್ಲಾಘಿಸಿದರು.
ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಮಾಧವ ಮಂಗಲ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್​ ಮಂಗಳೂರು ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಉಡುಪಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ 850 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶನಿವಾರ (ಜ.24) ಸಂಜೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಸಂಸದ ಕ್ಯಾಪ್ಟನ್​ ಬ್ರಿಜೇಶ್​ ಚೌಟ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್​ ಮಾತನಾಡಿ, ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸಾಧನೆಯೊಂದಿಗೆ ಯಶಸ್ವಿ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್​ ಸದಸ್ಯ ಕಿಶೋರ್​ಕುಮಾರ್​ ಪುತ್ತೂರು ಮಾತನಾಡಿದರು. ದ.ಕ. ಮೀನು ಮಾರಾಟ ಫೆಡರೇಷನ್​ ಹಾಗೂ ಮಹಾಲಕ್ಷ್ಮೀ ಬ್ಯಾಂಕ್​ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
"

ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಹಲವು ವರ್ಷದಿಂದ ಮೀನು ಮಾರಾಟ ಫೆಡರೇಷನ್​ ಹಾಗೂ ಮಹಾಲಕ್ಷ್ಮೀ ಬ್ಯಾಂಕ್​ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ. ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳ ಸಾಧನೆ ಇನ್ನಿತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕರಾವಳಿ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಸ್ಫೂರ್ತಿ ತುಂಬಲಿ.