ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್
ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಅನಿವಾಸಿ ಭಾರತೀಯರಿಂದಾಗಿ ಠೇವಣಿ ಹೆಚ್ಚಿದೆ. ಹೀಗಾಗಿ ಠೇವಣಿ ಮತ್ತು ಸಾಲ ಅನುಪಾತ ಶೇ.50ಕ್ಕಿಂತ ಕಡಿಮೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 22 ಸಾವಿರ ಕೋಟಿ ರೂ. ಸಾಲ ವಿತರಿಸಲಾಗಿದ್ದು, ಈ ವರ್ಷ ಉದ್ಯಮಶೀಲತೆಗಾಗಿ 3 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಕೆನರಾ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನ್ ಯೋಜನೆಯಲ್ಲಿ ಶೇ. 50ರಷ್ಟು ಸಬ್ಸಿಡಿದರಲ್ಲಿ 500 ರಿಂದ 600 ರಷ್ಟು ಎಂಎಸ್ಎಂಇ ಟಕಗಳನ್ನು ರಚಿಸಲಾಗಿದೆ. ಬ್ಯಾಂಕ್ಗಳಿಗೆ ಸಾಲ ವಿತರಣೆಯಲ್ಲಿ ಗುರಿ ನಿಗದಿಪಡಿಸಲಾಗಿದ್ದು, ಉತ್ತಮ ಅರ್ಜಿಗಳನ್ನು ಕೂಡಲೇ ಪರಿಗಣಿಸಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಸರ್ಕಾರಿ ಯೋಜನೆಯಲ್ಲಿ ಸಾಲ ಪಡೆದವರ ಕೆಲವು ಖಾತೆಗಳು ಎನ್ಪಿಎ ಆಗಿದ್ದು, ಪ್ರತಿ ಖಾತೆಯ ವಿವರಗಳನ್ನು ಸಂಗ್ರಹಿಸಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಸೇವಾ ಅವಧಿಯಲ್ಲಿ ಪ್ರತಿ ದಿನ 2 ಗಂಟೆಗಳನ್ನು ಸಾಲ ವಸೂಲಾತಿಗೆ ಮೀಸಲಿಡುವಂತೆ ಎಲ್ಲಾ ಪ್ರಬಂಧಕರಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಯೋಜನೆಯಲ್ಲಿ 2 ಲಕ್ಷದವರೆಗೆ ಹಾಗೂ ಶಿಕ್ಷಣ ಸಾಲವನ್ನು ಸಿಬಿಲ್ ಸ್ಕೋರ್ ಪರಿಗಣಸದೆ ನೀಡಲಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಆ್ಯಸ್ಟ್ರೊ ಮೋಹನ್, ಪ್ರಧಾನ ಕಾರ್ಯದರ್ಶಿ -ನಝೀರ್ ಪೊಲ್ಯ, ಕೋಶಾಧಿಕಾರಿ ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿ ಅಧ್ಯಕ್ಷ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.