ಉಡುಪಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ನಡೆದ ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಪೆರ್ಡೂರು ಮೂಲದ ಪ್ರದೀಪ ಪೂಜಾರಿ ಪ್ರಕರಣದ ತನಿಖೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ ತಿಳಿಸಿದ್ದಾರೆ.
ಉಡುಪಿ ಮಹಿಳಾ ಪೊಲೀಸ್ ಠಾಣೆ, ಹಿರಿಯಡ್ಕ ಪೊಲೀಸ್ ಠಾಣೆ, ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿ ಆದೇಶದ ಮೇರೆಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರದೀಪ ಪೂಜಾರಿ ಯುವತಿಯೋರ್ವಳನ್ನು 8 ವರ್ಷದಿಂದ ಪ್ರೀತಿಸುತ್ತಿದ್ದು ಅವಳನ್ನು ವಿವಾಹ ಮಾಡಿಕೊಳ್ಳಲೂ ಸಿದ್ಧನಿದ್ದನು. ಆರಂಭದಲ್ಲಿ ಯುವತಿಯೂ ಸಹ ಆತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಆತನ ವಿರುದ್ಧ ಯುವತಿಯು ಹಿರಿಯಡ್ಕ ಠಾಣೆಯಲ್ಲಿ ಅತ್ಯಾಚಾರ ಮಾಡಿದ್ದಾಗಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರದೀಪನನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಬಳಿಕ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದನು.
ದೂರು ದಾಖಲಿಸಿಕೊಳ್ಳದ ಪೊಲೀಸರು
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರದೀಪ ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದ. ಈ ವೇಳೆ ಯುವತಿಯ ಸಹೋದರನ ಕಡೆಯವರು ಹಲ್ಲೆ ಮಾಡಿದ್ದರು ಎನ್ನಲಾಗಿದ್ದು, ಗಾಯಗೊಂಡಿದ್ದ ಆತ ಹಿರಿಯಡ್ಕ ಠಾಣೆಗೆ ದೂರು ನೀಡಲು ಬಂದಿದ್ದ. ಆದರೆ, ಪೊಲೀಸರು ಆತನ ದೂರು ಸ್ವೀಕರಿಸದೆ ಅವಮಾನಿಸಿದ್ದರು ಎಂದು ತಿಳಿದು ಬಂದಿದೆ.
ಗಾಯಗೊಂಡಿದ್ದ ಪ್ರದೀಪ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ಪ್ರೇಮ ವೈಫಲ್ಯ ಹಾಗೂ ಯುವತಿ ಮನೆಯವರ ಹಲ್ಲೆಯಿಂದ ನೊಂದಿದ್ದ ಆತ ಜಿಲ್ಲಾಸ್ಪತ್ರೆಯ ಟಾಯ್ಲೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ಪ್ರದೀಪ ಆತ್ಮಹತ್ಯೆ ಮಾಡಿಕೊಂಡು 8 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ಕ್ರಮವನ್ನು ಕುಟುಂಬದವರು ಖಂಡಿಸಿದ್ದರು. ಅಲ್ಲದೆ, ಕಳೆದ ಶನಿವಾರ ಪೆರ್ಡೂರು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿಯಾನಂದ ಹೆಗ್ಡೆ, ಮೃತ ಪ್ರದೀಪನ ಸಹೋದರ ದಿಲೀಪ ಪೂಜಾರಿ, ವಕೀಲೆ ಸಹನಾ ಕುಂದರ್ ಇತರರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ, ಎಸ್ಪಿ ಅವರ ಮೇಲೆ ತಮಗೆ ನಂಬಿಕೆಯಿಲ್ಲ. ಅವರು ಯಾರದೋ ಒತ್ತಡಕ್ಕೆ ಒಳಗಾಗಿದ್ದಾರೆ. ನಾವು ತಿಳಿಸಿದ 8 ಆರೋಪಿಗಳಲ್ಲಿ ಒಬ್ಬರನ್ನೂ ಬಂಧಿಸದೆ, ತಮಗೆ ಬೇಕಾದಂತೆ ಹಾಗೂ ಯುವತಿ ಮನೆಯವರು, ಪೊಲೀಸ್ ಇಲಾಖೆಯ ಪರವಾಗಿಯೇ ಮಾತನಾಡುತ್ತಿದ್ದಾರೆ. ಪೊಲೀಸರಿಂದ ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು. ಇದಕ್ಕೆ ಆಗ್ರಹಿಸಿ ನ.11ರಂದು ಉಡುಪಿಯಲ್ಲಿ 'ಬೃಹತ್ ಜನಾಗ್ರಹ ಸಭೆ' ಆಯೋಜಿಸಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.