ತೊಕ್ಕೊಟ್ಟು ಬಸ್ ತಂಗುದಾಣ ರಸ್ತೆಗೆ ಇಂಟರ್‌ಲಾಕ್ ಅಳವಡಿಲಾಗುತ್ತಿದೆ.
ಉಳ್ಳಾಲ: ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿರುವ ಕೇಂದ್ರ ಬಸ್ ತಂಗುದಾಣದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದೆ. ಉಳ್ಳಾಲದ ಹೃದಯಭಾಗ, ರಾಷ್ಟ್ರೀಯ ಹೆದ್ದಾರಿ ಹೊಂದಿರುವ ನಗರಸಭಾ ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣ ಮೂಲಕ ಮುಡಿಪು, ಕೊಣಾಜೆ, ಬಿ.ಸಿ.ರೋಡು, ತಲಪಾಡಿ, ಉಳ್ಳಾಲ ಮಾತ್ರವಲ್ಲದೆ ಕೇರಳಕ್ಕೂ ಬಸ್‌ಗಳು ಸಂಚರಿಸುತ್ತದೆ.
ತಮಿಳುನಾಡಿಗೆ ಹೋಗುವ ವಾಹನಗಳೂ ಇಲ್ಲಿಂದಲೇ ಹೋಗುತ್ತವೆ. ಆದರೂ ಈ ನಿಲ್ದಾಣದ ರಸ್ತೆ ಹೊಂಡಗಳಿಂದ ಕೂಡಿ, ಇಂಟರ್‌ಲಾಕ್ ಎದ್ದು ಹೋಗಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರ ಮಾತ್ರವಲ್ಲದೆ ಸಾರ್ವಜನಿಕರಿಗೂ ಸಂಕಷ್ಟ ತಂದೊಡ್ಡಿತ್ತು.
ಈ ಬಗ್ಗೆ ವಿಜಯವಾಣಿಯ ಜೂನ್ 13ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ನಗರಸಭೆಯ ಮುಖ್ಯಾಧಿಕಾರಿ ಸಂತೋಷ್ ಎಸ್.ಡಿ.ಅವರು ಗುಂಡಿಗಳಿಗೆ ಮುಕ್ತಿ ನೀಡಲು ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಂಟರ್‌ಲಾಕ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಹೊಂಡಗಳಿಂದ ಸಂಪೂರ್ಣ ಮುಕ್ತವಾದರೆ ವಾಹನ ಸಂಚಾರಕ್ಕೆ ಅನುಕೂಲ ಆಗಲಿದೆ. ಇದೇ ವೇಳೆ ಬಸ್ ತಂಗುದಾಣಕ್ಕೂ ಕಾಯಕಲ್ಪ ನೀಡಬೇಕೆನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.