ಕಾಸರಗೋಡು: ನಗರದ ನೆಲ್ಲಿಕುಂಜೆ ಲೈಟ್ ಹೌಸ್ ಬಳಿಯ ಸಮುದ್ರ ದಡದಲ್ಲಿ ಜು.11ರಂದು ಪತ್ತೆಯಾಗಿದ್ದ ರುಂಡವಿಲ್ಲದ ಪುರುಷನ ದೇಹ ಆಸ್ಪತ್ರೆಯೊಂದರಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾದ ಮೃತದೇಹವೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವರದಿ ತಿಳಿಸಿದೆ.
ರುಂಡವಿಲ್ಲದ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭ ಮೃತದೇಹದ ಎದೆ ಭಾಗ, ಹೊಟ್ಟೆಗೆ ಇರಿತದ ಗಾಯಗಳುಂಟಾಗಿದ್ದು, ಇದಕ್ಕೆ ಹೊಲಿಗೆ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೃತದೇಹ ಕಡಲು ಸೇರಿರುವುದು ನಿಗೂಢತೆಗೆ ಕಾರಣವಾಗಿದೆ. ಮಂಗಳೂರು ಆಸುಪಾಸಿನ ಮೃತದೇಹವನ್ನು ಸಮುದ್ರಕ್ಕೆ ಎಸೆದಿರಬಹುದೆಂದು ಶಂಕಿಸಲಾಗಿದೆ.
ಪುರುಷ ಮೃತದೇಹವೆಂದು ಗುರುತು ಬಿಟ್ಟರೆ, ವಯಸ್ಸು ದೃಢೀಕರಿಸಲು ಸಾಧ್ಯವಾಗಿಲ್ಲ. ಒಂದು ತಿಂಗಳ ಹಿಂದೆ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮೃತದೇಹದ ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಡಿಎನ್‌ಎ ಪರೀಕ್ಷೆ ಹಾಗೂ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ.