ಉಡುಪಿಯಲ್ಲಿ ಆಯೋಜಿಸಿದ್ದ 'ಪೊಂಜೊನಗಲ ಆಟಿದ ಕೂಟ'ವನ್ನು ಯಶ್​ಪಾಲ್​ ಸುವರ್ಣ ಹಾಗೂ ಜಯಕರ್​ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಗೀತಾ ವಾಗ್ಲೆ, ಶೀಲಾ ಶೆಟ್ಟಿ, ಪದ್ಮಾ ರತ್ನಾಕರ್​, ಜ್ಯೋತಿ ರಾವ್​, ರೇವತಿ, ಸಹಾಯಾ ಮೇರಿ ಇದ್ದರು. 
ಉಡುಪಿ

ಸಂಸ್ಕೃತಿ, ಸಂಪ್ರದಾಯದ ಭಾಗ ಅಡುಗೆ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅನಿಸಿಕೆ 

* 'ಪೊಂಜೊನಗಲ ಆಟಿದ ಕೂಟ' ಉದ್ಘಾಟನೆ

ಉಡುಪಿ: ನಮ್ಮ ಹಿಂದಿನ ಹಿರಿಯ ಮಹಿಳೆಯರು ಮಾಡುತ್ತಿದ್ದ ಅಡುಗೆ ಹಾಗೂ ಅವುಗಳ ಪ್ರಕಾರಗಳು ಇಂದಿನ ಯಾಂತ್ರೀಕೃತ ಯುಗದ ಬಹುತೇಕ ಮಹಿಳೆಯರಿಗೆ ತಿಳಿದಿಲ್ಲ. ಅಡುಗೆ ಕಾರ್ಯವೂ ಸಹ ಸಂಸ್ಕೃತಿ, ಸಂಪ್ರದಾಯದ ಭಾಗವೇ ಆಗಿದ್ದು, ಅದನ್ನು ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯವಾಗಬೇಕು. ಅದಕ್ಕೆ ಆಟಿದ ಕೂಟ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.
ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ವತಿಯಿಂದ ಬಡಗುಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿ ಸಹಭಾಗಿತ್ವದಲ್ಲಿ ಉಡುಪಿಯ ಜಗನ್ನಾಥ ಸಭಾಭವನದಲ್ಲಿ  ಆಯೋಜಿಸಿದ್ದ 'ಪೊಂಜೊನಗಲ ಆಟಿದ ಕೂಟ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕ್ಕೆ ಪೂರಕ

ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಲೆ ಮಾತನಾಡಿ, ನಮ್ಮ ಪರಿಸರದಲ್ಲಿ ದೊರೆಯುವ ಅನೇಕ ಬಗೆಯ ಸಸ್ಯಗಳಿಂದ ರುಚಿಕರವಾದ ಅಡುಗೆ ಮಾಡಬಹುದಾಗಿದೆ. ಮಳೆಗಾಲದ ಆಟಿ ದಿನಗಳಲ್ಲಿ ಲಭಿಸುವ ವಿವಿಧ ಗಿಡಮೂಲಿಕೆಗಳ ಅಡುಗೆ ಮಾಡಿ ಸೇವಿಸಿದರೆ ಆರೋಗ್ಯ ಇನ್ನಷ್ಟು ಉತ್ತಮವಾಗಲಿದೆ. ಆಟಿದ ಊಟ, ತಿನಿಸುಗಳಲ್ಲಿ ಔಷಧೀಯ ಗುಣ ಇರುತ್ತದೆ ಎಂದು ತಿಳಿಸಿದರು.
ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ವಿವಿಧ ಪದಾರ್ಥ, ತಿಂಡಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ನೂರಾರು ಮಹಿಳೆಯರು ಆಟಿದ ಭೋಜನ ಸವಿದು ಸಂತಸಪಟ್ಟರು. ವಿವಿಧ ಮಹಿಳಾ ತಂಡಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಶೀಲಾ ಶೆಟ್ಟಿ, ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಪದ್ಮಾ ರತ್ನಾಕರ್​ ಸ್ವಾಗತಿದರು. ಜ್ಯೋತಿ ರಾವ್​ ಹಾಗೂ ರೇವತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಾ ಮೇರಿ ವಂದಿಸಿದರು.
"

ಉಡುಪಿಯ ಮಹಿಳಾ ಒಕ್ಕೂಟ 30 ವರ್ಷದಿಂದ ವಿವಿಧ ಬಗೆಯ ಕಾರ್ಯಕ್ರಮ ಸಂಘಟಿಸುತ್ತ ಬಂದಿದೆ. ಪ್ರತಿವರ್ಷವೂ ಆಟಿದ ಕೂಟ ಆಯೋಜಿಸುವ ಮೂಲಕ ಸಂಸ್ಕೃತಿಯನ್ನು ನೆಪಿಸುವ ಕಾರ್ಯ ಮಾಡುತ್ತಿದೆ. ಇದು ಮಹಿಳೆಯರ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.

— ಜಯಕರ್​ ಶೆಟ್ಟಿ ಇಂದ್ರಾಳಿ. ಬಡಗುಬೆಟ್ಟು ಸೊಸೈಟಿ ಅಧ್ಯಕ್ಷ.