ಬಹು ಮಹಡಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳ ಕಲುಷಿತ ನೀರು ಸಾರ್ವಜನಿಕ ಚರಂಡಿಯಲ್ಲಿ ಶೇಖರಣೆಗೊಂಡಿರುವುದು. 
ಉಡುಪಿ

ಚರಂಡಿಗೆ ಕಲುಷಿತ ನೀರು!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರ ಭಾಗದಲ್ಲಿರುವ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳ ಕಲುಷಿತ ನೀರು ಸಾರ್ವಜನಿಕ ಚರಂಡಿಯ ಒಂದು ಕಡೆ ಶೇಖರಣೆಗೊಂಡಿದ್ದು, ಇಂದಿರಾನಗರ ನಿವಾಸಿಗಳನ್ನು ಕೆರಳಿಸಿದೆ.
ಎಸ್.ಎಂ.ಎಸ್. ಕಾಲೇಜಿನ ಬಳಿಯಿಂದ ಬ್ರಹ್ಮಾವರ ಬಸ್ ನಿಲ್ದಾಣದ ತನಕ ಪೂರ್ವ ಭಾಗ ಚಾಂತಾರು ಗ್ರಾಮ ಪಂಚಾಯಿತಿ, ಪಶ್ಚಿಮ ಭಾಗ ವಾರಂಬಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದು, ತಗ್ಗು ಪ್ರದೇಶ ಹೊಂದಿದ ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಮಲಾ ಶಾಲೆಯ ಎದುರು ಭಾಗದಲ್ಲಿ ನೀರು ಶೇಖರಣೆಗೊಂಡಿದೆ.
ಇಂದಿರಾನಗರದಲ್ಲಿ 450 ಸರ್ಕಾರಿ ನಿವೇಶನದ ಮನೆಗಳಿದ್ದು, ಅತಿ ಹೆಚ್ಚು ಜನಸಂಖ್ಯೆ ವಾಸವಿರುವ ಇಲ್ಲಿನ ಜನರು ಪ್ರತಿ ದಿನ ಮೂಗು ಮುಚ್ಚಿ ಅನ್ನ ನೀರು ಸೇವಿಸುವಂತಾಗಿದೆ. ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಗೆ ದೂರು ನೀಡಿದ ಕಾರಣ ಜಿಲ್ಲಾಧಿಕಾರಿ ಮತ್ತು ಇಲಾಖೆಗೆ ಗ್ರಾಮ ಪಂಚಾಯಿತಿ ದೂರು ನೀಡಿದ್ದು, ವಾಣಿಜ್ಯ ಸಂಕೀರ್ಣದ ವಾಲೀಕರಿಗೆ ಕಲುಷಿತ ನೀರನ್ನು ಶುದ್ಧೀಕರಿಸದೆ ಚರಂಡಿಗೆ ಹರಿಸುತ್ತಿರುವ ಕುರಿತು ನೋಟಿಸ್ ನೀಡಿದ್ದರು. ಸೋಮವಾರ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಇಲ್ಲಿನ ಹಲವಾರು ಕಟ್ಟಡ ವಾಲೀಕರಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆ ಹೀಗೇ ಮುಂದುವರಿದಲ್ಲಿ ಪ್ರತಿಭಟನೆ ನಡೆಸಲು ಸಾರ್ವಜನಿಕರು ಮುಂದಾಗಿದ್ದಾರೆ.

ಬ್ರಹ್ಮಾವರದಲ್ಲಿ ಅನೇಕ ಬಹುಮಹಡಿ ಕಟ್ಟಡಗಳ ತ್ಯಾಜ್ಯ ನೀರು ಶುದ್ಧಿಕರಿಸದೆ ನೇರವಾಗಿ ಚರಂಡಿಗೆ ಬಿಡುವುದು ಇಂದಿರಾ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ, ಪರಿಸರ ವಾಲಿನ್ಯ ಮತ್ತು ಪ್ರವಾಸೋದ್ಯಮ ಇಲಾಖೆಗೆ ಲಿಖಿತ ದೂರು ನೀಡಿದ್ದೇವೆ. ಸಾರ್ವಜನಿಕರ ದೂರಿಗೆ ತುರ್ತು ಸ್ಪಂದನೆ ದೊರಕಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ.