ದರ್ಗಾ ಮುಂಭಾಗದಲ್ಲಿರುವ ತೆರೆದ ಬಾವಿ.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಒಂದು ವಾರ್ಡ್‌ನ ಕುಡಿಯುವ ನೀರಿನ ಪೂರೈಕೆಗಾಗಿ ನಿರ್ಮಿಸಲಾಗಿದ್ದ ತೆರೆದ ಬಾವಿಯೊಂದು ಇಂದು ಹಲವು ವಾರ್ಡ್‌ಗಳ ಜನರಿಗೆ ಜೀವನಾಡಿಯಾಗಿದೆ. ಆದರೆ, ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡು ಬಣ್ಣ ಬದಲಾಗಿದ್ದು, ಪೈಪ್‌ಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಸಾರ್ವಜನಿಕರು ಕುಡಿಯಲು ನೀರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಉಳ್ಳಾಲ ನಗರಸಭಾ ವ್ಯಾಪ್ತಿಯ ವಾರ್ಡ್ ನಂ. 11ರ ಮೇಲಂಗಡಿ ಮಿಲ್ಲತ್‌ನಗರದ ನಿವಾಸಿಗಳ ಗೋಳಿನ ಕಥೆ.
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿರುವ ಒಟ್ಟು ಏಳು ತೆರೆದ ಬಾವಿಗಳ ಪೈಕಿ, ದರ್ಗಾದ ಮುಖ್ಯ ಗೇಟ್ ಮುಂಭಾಗದಲ್ಲಿರುವ ಈ ಬಾವಿ ಬತ್ತದ ಒರತೆಯಿಂದ ಕೂಡಿದೆ. ನಗರಸಭೆಯಲ್ಲಿ ಬೇಸಿಗೆಯ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದ ಹಿನ್ನೆಲೆಯಲ್ಲಿ, ಮಿಲ್ಲತ್ ನಗರದ ಜನರಿಗೆ ಅನುಕೂಲ ಕಲ್ಪಿಸಲು ದಾನಿಯೊಬ್ಬರು ಇಲ್ಲಿ ಬಾವಿ ನಿರ್ಮಿಸಲು ಮುಂದೆ ಬಂದಿದ್ದರು. ಆರಂಭದಲ್ಲಿ ಈ ಜಾಗವನ್ನು ದರ್ಗಾಕ್ಕೆ ಬಿಟ್ಟುಕೊಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ, ಸ್ಥಳೀಯರ ಹಿತದೃಷ್ಟಿಯಿಂದ ಹಿಂದಿನ ದರ್ಗಾ ಆಡಳಿತ ಸಮಿತಿ ಜಮೀನು ಒದಗಿಸಿತು.
ಅದರಂತೆ 2019ರ ಮೇ ತಿಂಗಳಲ್ಲಿ ದಾನಿಯ ವತಿಯಿಂದ ಬಾವಿ ನಿರ್ಮಾಣಗೊಂಡಿತು. ಬಳಿಕ ನಗರಸಭೆಯಿಂದ ಮೋಟಾರು ಮತ್ತು ಪೈಪ್‌ಗಳನ್ನು ಅಳವಡಿಸಿ, ಕೇವಲ ಮಿಲ್ಲತ್ ನಗರಕ್ಕೆ ಮಾತ್ರವಲ್ಲದೆ ಬಂಡಿಕೊಟ್ಯ, ಅಲೇಕಳ ಹಾಗೂ ಹಳೇಕೋಟೆ ವಾರ್ಡ್‌ಗಳಿಗೂ ನೀರು ಸರಬರಾಜು ಮಾಡಲು ಆರಂಭಿಸಲಾಯಿತು. ದಿನವಿಡೀ ಪಂಪ್ ಚಾಲನೆಯಲ್ಲಿದ್ದರೂ ನೀರಿನ ಕೊರತೆ ಕಾಡಿರಲಿಲ್ಲ. ಆದರೆ, ಪ್ರಸ್ತುತ ನೀರಿನ ಗುಣಮಟ್ಟ ಸಂಪೂರ್ಣ ಹದಗೆಟ್ಟಿದೆ.
ಕಲುಷಿತ ಪತ್ತೆಯೇ ಸವಾಲು!
ಹಿಂದೆ ಈ ಬಾವಿಗೆ ಸರಿಯಾದ ಮುಚ್ಚಳವಿಲ್ಲದೆ ಕಸ-ಕಡ್ಡಿ ಮತ್ತು ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿದ್ದವು. ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆಯಿಂದ ಕಬ್ಬಿಣದ ಮುಚ್ಚಳವನ್ನು ಅಳವಡಿಸಲಾಯಿತಾದರೂ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ನೀರಿನಲ್ಲಿ ವಿಚಿತ್ರ ಬದಲಾವಣೆಗಳು ಕಂಡುಬರುತ್ತಿವೆ.
ಬಳಕೆಗೂ ಯೋಗ್ಯವಲ್ಲ
ನೀರಿನ ಬಣ್ಣ ಸಂಪೂರ್ಣ ಬದಲಾಗಿದ್ದು, ಪೈಪ್‌ಗಳ ಒಳಗೆ ಮಣ್ಣು ತುಂಬಿಕೊಳ್ಳುತ್ತಿದೆ. ಮನೆಗಳ ಮೇಲ್ಛಾವಣಿಯ ನೀರಿನ ಟ್ಯಾಂಕ್‌ಗಳಿಗೆ ಬೀಳುವ ನೀರಿನಲ್ಲಿ ವಿಚಿತ್ರ ವಸ್ತುಗಳು ತೇಲಾಡುತ್ತಿದ್ದು, ಅಸಹ್ಯಕರ ವಾತಾವರಣ ಸೃಷ್ಟಿಯಾಗಿದೆ. ಈ ನೀರನ್ನು ಕುಡಿಯಲು ಬಳಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಾವಿಯ ನೀರಿಗೆ ಒಳಚರಂಡಿ ನೀರು ಸೇರಿಕೊಂಡಿದೆಯೇ ಎಂಬ ಗಂಭೀರ ಸಂಶಯ ಈಗ ಸಾರ್ವಜನಿಕರಲ್ಲಿ ಮೂಡಿದೆ. ಈ ಕಲುಷಿತ ನೀರನ್ನು ಬಳಸಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ದೊಡ್ಡ ಆತಂಕ ಎದುರಾಗಿದೆ.
ಕೆಲವು ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಬಂದ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಮಿಲ್ಲತ್ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಸಮಸ್ಯೆ ಇರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
— ಸಂತೋಷ್ ಎಸ್.ಡಿ. ಉಳ್ಳಾಲ ನಗರಸಭೆ ಪೌರಾಯುಕ್ತ
ಮಿಲ್ಲತ್ ನಗರ ವಾರ್ಡ್‌ಗೆ ಸೀಮಿತಗೊಳಿಸಿದ್ದ ಈ ಬಾವಿ ನೀರು ಪ್ರಸ್ತುತ ಐದಕ್ಕಿಂತ ಹೆಚ್ಚು ಪ್ರದೇಶಗಳಿಗೆ ಸರಬರಾಜು ಆಗುತ್ತಿದೆ. ಮೇಲುಸ್ತುವಾರಿ ನೋಡುವವರ ನಿರ್ಲಕ್ಷೃದಿಂದ ದಿನವಿಡೀ ಮೋಟಾರ್ ಕಾರ್ಯ ನಿರಂತರವಾಗಿ ಇರುವುದರಿಂದ ಕೆಸರು ಮಿಶ್ರಿತ ನೀರು ಬರುತ್ತಿದೆ. ನಗರಸಭೆ ಸ್ಥಳೀಯರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಬೇಕಿದೆ.
— ಾರೂಕ್ ಉಳ್ಳಾಲ್ ಉಳ್ಳಾಲ ನಗರಸಭೆ ಮಾಜಿ ಸದಸ್ಯ
ಕಲುಷಿತ ನೀರಿನ ಸಮಸ್ಯೆ ನಾಲ್ಕು ವರ್ಷಗಳಿಂದ ಇದ್ದು ನಗರಸಭೆಗೆ ನಿರಂತರ ದೂರು ನೀಡುತ್ತಾ ಬರಲಾಗಿದೆ. ಈ ಬಾರಿ ಮತ್ತೆ ದೂರು ನೀಡಲಾಗಿದ್ದು, ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ಮನವಿಗೆ ಸ್ಪಂದನೆ ಸಿಗದಿದ್ದಲ್ಲಿ ಆ.17ರಂದು ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು.
— ಕಮಾಲುದ್ದೀನ್ ನಿಝಾಮ್ ಮೇಲಂಗಡಿ ದೂರುದಾರ