ಶಾಸಕ ಯಶ್ಪಾಲ್ ಸುವರ್ಣ ಗೃಹಕಚೇರಿಗೆ ತೆರಳಿದ ಪೊಲೀಸ್ ನಿರೀಕ್ಷಕರು ನೋಟಿಸ್ ನೀಡಿ ಸಹಿ ಪಡೆದುಕೊಂಡಿದ್ದಾರೆ.
ಉಡುಪಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದಾರೆ. ಬುಧವಾರ ಸಂಜೆ ಗೃಹಕಚೇರಿಗೆ ತೆರಳಿದ ಪೊಲೀಸ್ ನಿರೀಕ್ಷಕರು ನೋಟಿಸ್ ನೀಡಿ ಸಹಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ಪಾಲ್ ಸುವರ್ಣ, ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ಯಾವುದೇ ನೋಟೀಸು ಕೊಟ್ಟರು ತೆಗೆದುಕೊಳ್ಳಲು ಸಿದ್ದನಿದ್ದೇನೆ. ದೇಶ ವಿರೋಧಿ ಚಟುವಟಿಕೆ, ಡಕಾಯಿತಿ ದೊಂಬಿ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡಿದ್ದಕ್ಕೆ ಮಾತನಾಡಿದೆ. ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಪೊಲೀಸರು ಎಷ್ಟೇ ನೋಟಿಸ್ ನೀಡಿದರೂ ನನ್ನ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ನೀಟ್ ಹೊರತಾಗಿ ಬೇರೆ ವಿಚಾರಗಳ ಬಗ್ಗೆ ಪ್ರತಿಭಟನೆಯಲ್ಲಿ ಮಾತನಾಡಿದ್ದಾರೆ. ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕ ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ರಾಹುಲ್ ಗಾಂಧಿ ಯಾವತ್ತು ವಿದೇಶ ಪ್ರವಾಸದಲ್ಲಿರುತ್ತಾರೆ. ದೆಹಲಿ ಪ್ರತಿಭಟನೆ ವೇಳೆ ಕಾಂಗ್ರೆಸ್ ವರ್ತನೆ ಸರಿಯಿಲ್ಲ. ಸಂಸತ್ತಿನಲ್ಲಿ ರಾಹುಲ್ ಈಡಿಯಟ್ ಎಂಬ ಪದ ಬಳಸಿದ್ದಾರೆ. ರಾಜ್ಯ ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಗಮನ ಕೊಡಲಿ. ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಶಾಲಾ ಕಟ್ಟಡಗಳು ಸೋರಿಕೆಯಾಗುತ್ತಿವೆ. ಅಂಗನವಾಡಿಗಳಲ್ಲಿ ಮೊಟ್ಟೆ ನೀಡುತ್ತಿಲ್ಲ. ಕರಾವಳಿಗೆ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ್ದೇ ಸರ್ಕಾರ ಇರುವಾಗ ದೂರು ನೀಡುವುದು ಸಹಜ. ಸಿದ್ಧಾಂತ ಬದ್ಧತೆಯಲ್ಲಿ ನನಗೆ ರಾಜಿ ಇಲ್ಲ. ಮಣಿಪಾಲ ಪ್ರತಿಭಟನೆ ಬಗ್ಗೆ ಯುವ ಮೋರ್ಚಾ ದೂರು ನೀಡಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಶಾಶ್ವತ ಅಲ್ಲ. ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಬೇಕು. ಕಾಂಗ್ರೆಸಿಗರಿಗೆ ಹೆದರಿ ಕೆಲಸ ಮಾಡಬಾರದು. ಒತ್ತಡಗಳಿಗೆ ಮಣಿದು ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದರು.
ℹ️ ಕಾರ್ಯಕರ್ತರಿಂದ ಭವ್ಯ ಸ್ವಾಗತ
ನಗರ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣರಿಗೆ ಬಿಜೆಪಿ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು. ತಾಪಂ ಕಟ್ಟಡದಲ್ಲಿರುವ ಕಚೇರಿಗೆ ಆಗಮಿಸಿದಾಗ ನೂರಾರು ಕಾರ್ಯಕರ್ತರು ಜಯಘೋಷ ಮೊಳಗಿದರು. ಬಿಜೆಪಿ ಜಿಲ್ಲಾ ಮುಖಂಡರು ಮತ್ತು ಶಾಸಕ ಭರತ್ ಶೆಟ್ಟಿ ಕಾರ್ಯಕರ್ತರಿಗೆ ಸಾತ್ ನೀಡಿದರು. ಕಾರ್ಯಕರ್ತರು ಸೇರಿರುವ ಹಿನ್ನೆಲೆಯಲ್ಲಿ ಪೊಲೀಸರು ಗೃಹ ಕಚೇರಿಗೆ ಆಗಮಿಸಿ ನೋಟಿಸ್ ನೀಡಿದರು. ಬುಧವಾರ ರಾತ್ರಿ ಶಾಸಕ ಯಶ್ ಪಾಲ್ ಸುವರ್ಣ ಬೆಂಗಳೂರಿಗೆ ತೆರಳಿದ್ದಾರೆ.