ಮಾದಕ ವಸ್ತುಗಳ ಚಟುವಟಿಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆ ಆರಂಭಿಸಿರುವ ಕ್ಯುಆರ್​ ಕೋಡ್​. 
ಉಡುಪಿ

ಮಾದಕ ವಸ್ತು ನಿಯಂತ್ರಣಕ್ಕೆ ಬಳಸಿ ಕ್ಯುಆರ್​ ಕೋಡ್​

* ಸಾರ್ವಜನಿಕರಿಗೆ ಡಿಸಿ ಸ್ವರೂಪಾ ಕರೆ

* ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಲು ಕ್ಯುಆರ್​ ಕೋಡ್​ ಆರಂಭಿಸಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೇ ಕ್ಯುಆರ್​ ಕೋಡ್​ ಮೂಲಕ ತಿಳಿಸಬೇಕು. ಜಿಲ್ಲೆಯನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.  ಸಾರ್ವಜನಿಕರಿಗೆ ಕರೆ ನೀಡಿದರು. 
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಜೂ.30) ಆಯೋಜಿಸಿದ್ದ ಎನ್​ಸಿಒಆರ್​ಡಿ (Narco Co-ordination Center) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಮಾಹಿತಿ ನೀಡಿದವರ ವಿವರ ರಹಸ್ಯವಾಗಿ ಇಡಲಾಗುವುದು ಎಂದರು. 
ಉಡುಪಿಯಲ್ಲಿ ನಡೆದ ಎನ್​ಸಿಒಆರ್​ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಹರಿರಾಮ್​ ಶಂಕರ್​, ರಶ್ಮಿ, ಸುಧಾಕರ್​ ನಾಯಕ್​, ಮಹಾಂತೇಶ್​ ಹಂಗರಗಿ ಇತರರಿದ್ದರು.
ಎಲ್ಲೆಡೆ ಕೋಡ್​ ಅಳವಡಿಸಿ
ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆಯವರು ಕ್ಯುಆರ್​ ಕೋಡ್​ಅನ್ನು ಸಾರ್ವಜನಿಕರಿಗೆ ಗೋಚರಿಸುವಂತೆ ದೊಡ್ಡದಾಗಿ ಅಳವಡಿಸಿಬೇಕು. ಬಸ್​ ನಿಲ್ದಾಣ, ಕೈಗಾರಿಕಾ ಹಾಗೂ ಕಾರ್ಮಿಕ ಅಸೋಸಿಯೇಷನ್​ ಕಡೆಗಳಲ್ಲಿ ಹಾಗೂ ಸಿನಿಮಾ ಹಾಲ್​ಗಳಲ್ಲಿ ಈ ಕುರಿತು ಪ್ರಚಾರ ಪಡಿಸಬೇಕು. ಮಾದಕ ವಸ್ತು ಸೇವನೆಯಿಂದ ಆರೋಗ್ಯ, ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೆ, ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ ಎಂದರು.

ಸೂಕ್ತ ಪರಿಶೀಲನೆ ಅಗತ್ಯ

ಯುವ ಸಮುದಾಯ ಈ ದುಶ್ಚಟದತ್ತ ಆಕರ್ಷಿತರಾಗುತ್ತಿದ್ದು ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಾರ್ಸಲ್​ ಮೂಲಕವೂ ಮಾದಕ ವಸ್ತು ಸರಬರಾಜು ಸಾಧ್ಯತೆಗಳಿದ್ದು ಸೂಕ್ತವಾಗಿ ಪರಿಶೀಲಿಸಬೇಕು. ಹೊರ ರಾಜ್ಯದಿಂದ ಬರುವ ಕಾರ್ಮಿಕರ ಬಗ್ಗೆಯೂ ಸಹ ಎಚ್ಚರ ವಹಿಸಬೇಕು. ಕರಾವಳಿ ಕಾವಲು ಪಡೆಯವರು ಬೋಟ್​ಗಳ ತಪಾಸಣೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​, ಸಹಾಯಕ ಕಮಿಷನರ್​ ರಶ್ಮಿ, ಅಪರ ಪೊಲೀಸ್​ ವರಿಷ್ಠ ಸುಧಾಕರ್​ ನಾಯಕ್​, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಔಷಧ ವಿತರಣೆಗೆ ವೈದ್ಯರ ಚೀಟಿ ಅಗತ್ಯ
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಿಬ್ಬಂದಿಗಳು ಜಮೀನು, ತೋಟ ಹಾಗೂ ಕಾಡಂಚಿನಲ್ಲಿರುವ ಮನೆಗಳಿಗೆ ಆಗಾಗ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿ ಗಾಂಜಾ ಬೆಳೆಯುತ್ತಿದ್ದಾರೆಯೋ ಎಂದು ಪರಿಶೀಲಿಸಬೇಕು.ಔಷಧ ಅಂಗಡಿಯವರು ಅಮಲು ತರಿಸುವ ಔಷಧಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವಂತಿಲ್ಲ. ವೈದ್ಯರ ನಿರ್ದೇಶನದ ಚೀಟಿಗಳಿದ್ದಲ್ಲಿ ಮಾತ್ರ ಅಂತಹ ಔಷಧ, ಮಾತ್ರೆ ನೀಡಬೇಕು. ಆ ಕುರಿತು ಕಡ್ಡಾಯವಾಗಿ ಸೂಚನಾ ಫಲಕ ಅಳವಡಿಸಬೇಕು. ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳು ಎಲ್ಲ ಮೆಡಿಕಲ್​ ಸ್ಟೋರ್​ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕು. ಸಂಶಯ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ವೈದ್ಯಕಿಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಡಿಸಿ ಸೂಚಿಸಿದರು.
"

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಮಿಕಲ್​ ಫ್ಯಾಕ್ಟರಿ, ಎಲ್ಲ ಕೈಗಾರಿಕಾ ಕೇಂದ್ರಗಳಿಗೆ ಕಾರ್ಮಿಕ ಇಲಾಖೆಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಡ್ರಗ್ಸ್​ ತಯಾರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಪ್ರತಿ ಶಾಲಾ-ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ಸ್​ ಸಮಿತಿ ರಚಿಸಬೇಕು. ಕಾಲೇಜುಗಳಲ್ಲಿ ಪ್ರತಿ ತಿಂಗಳ 25ರಂದು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.