Crime 
ಉಡುಪಿ

ಅಡಿಕೆ ಕಳವು ಆರೋಪದಲ್ಲಿ ಥಳಿಸಿದ ಪೊಲೀಸರು!

ಕಾಸರಗೋಡು: ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ನಿರಪರಾಧಿ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಆತನಿಗೆ ಥಳಿಸಿ, ಅಡಿಕೆ ಕಳವುಗೈದಿರುವ ಬಗ್ಗೆ ಬಾಯಿಬಿಡುವಂತೆ ಒತ್ತಾಯಿಸಿದ ಘಟನೆ ಬದಿಯಡ್ಕ ಠಾಣೆಯಲ್ಲಿ ನಡೆದಿದೆ. ನಂತರ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ.
ಬದಿಯಡ್ಕ ಠಾಣೆ ವ್ಯಾಪ್ತಿಯ ಕುಂಬ್ಡಾಜೆ ಪಂಚಾಯಿತಿ ಏತಡ್ಕ ನಿವಾಸಿ ಇಬ್ರಾಹಿಂ ಎಂಬುವರ ಮನೆ ಸಮೀಪವಿದ್ದ ಸೋಲಾರ್ ಡ್ರೈಯರ್‌ನಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವಾಗಿತ್ತು. ಈ ಕುರಿತು ಇಬ್ರಾಹಿಂ ದೂರು ನೀಡಿದ್ದು, ಇದಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ಫೂಟೇಜ್ ಒದಗಿಸಿದ್ದರು. ಇದರಲ್ಲಿದ್ದ ವ್ಯಕ್ತಿಗೆ ಹೋಲಿಕೆಯಾಗುತ್ತಿದ್ದ ಏತಡ್ಕ ಪರಿಸರದ ಅಜಿತ್ ಎಂಬುವರನ್ನು ಠಾಣೆಗೆ ಕರೆಸಿದ ಪೊಲೀಸರು ಥಳಿಸಿದ್ದಾರೆ.
ನೈಜ ಆರೋಪಿಗಳು ಪತ್ತೆಯಾದ ಬಳಿಕ ಅಜಿತ್ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಕಿನ್ನಿಂಗಾರ್ ಕೈಪ್ಪಮಂಗಳ ನಿವಾಸಿ ಕೆ.ಗಣೇಶ್ (29), ಗುತ್ತಿಯಡ್ಕ ನಿವಾಸಿಗಳಾದ ಶಿಶಿರ್ ಕುಮಾರ್ (19) ಮತ್ತು ಸತೀಶ್ ಕುಮಾರ್ (31) ಬಂಧಿತರು.