pocso case 
ಉಡುಪಿ

ಯುವಕನ ವಿರುದ್ಧ ಪೋಕ್ಸೊ ಕೇಸ್

ಕಡಬ: ಶಾಲಾ ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪರಿಚಿತ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

16 ವರ್ಷದ ಅಪ್ರಾಪ್ತ ಬಾಲಕಿ ಆ.20ರಂದು ಬೆಳಗ್ಗೆ ಶಾಲಾ ಪ್ರವಾಸಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಆದರೆ ಪ್ರವಾಸ ಮುಗಿದರೂ ಬಾಲಕಿ ಮನೆಗೆ ವಾಪಸ್ ಬಾರದಿದ್ದಾಗ ಆತಂಕಗೊಂಡ ಆಕೆಯ ತಾಯಿ ಆ.21ರಂದು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಶೋಧಕಾರ್ಯಕ್ಕೆ ತಕ್ಷಣವೇ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಪೊಲೀಸ್ ತಂಡವು ಮೊಬೈಲ್ ಲೊಕೇಶನ್ ಹಾಗೂ ಖಚಿತ ಸುಳಿವು ಆಧರಿಸಿ ತನಿಖೆ ನಡೆಸಿ 23ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ವಳಗೆ ಸೋಮನಹಳ್ಳಿಯಲ್ಲಿ ಬಾಲಕಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಡಬ ಠಾಣೆಗೆ ಕರೆತಂದಿದೆ. ಪರಿಚಿತನಾದ ಯುವಕನೊಬ್ಬನ ಕರೆಯ ಮೇರೆಗೆ ತಾನು ಮೊದಲು ಬೆಂಗಳೂರಿಗೆ ತೆರಳಿದ್ದು ಅಲ್ಲಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದಾಗಿ ಬಾಲಕಿ ಪೊಲೀಸರ ಮುಂದೆ ತಿಳಿಸಿದ್ದಾಳೆ. ಪೋಕ್ಸೊ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಬಾಲಕಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.