ಎಸ್ಪಿಜಿ ತಂಡದಿಂದ ಭದ್ರತಾ ಪರಿಶೀಲನೆ.
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಕೃಷ್ಣಮಠಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭದ್ರತೆ ಜವಾಬ್ದಾರಿ ಹೊತ್ತಿರುವ ಎಸ್ಪಿಜಿ ಮತ್ತು ಆ್ಯಂಟಿ ಸಬೋಟೇಜ್ ಚೆಕ್ ತಂಡ ಮಂಗಳವಾರ ಕೃಷ್ಣ ಮಠ ಸುತ್ತಮುತ್ತ ಹಾಗೂ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮ ವೇದಿಕೆ ನಿಮಾರ್ಣ ಕಾರ್ಯ ಪರಿಶೀಲನೆ ನಡೆಸಿದ್ದಾರೆ.
ಎಸ್ ಪಿಜಿ ಮತ್ತು ಎಎಸ್ ಟಿ ತಂಡ ಆದಿಉಡುಪಿಯ ಹೆಲಿಪ್ಯಾಡ್, ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗದಲ್ಲಿ ಪರಿಶೀಲನೆ ನಡೆಸಿದೆ. ರಥಬೀದಿ ಮತ್ತು ಪೆಂಡಾಲ್ ಜಾಗದಲ್ಲೂ ತೀವ್ರ ತಪಾಸಣೆಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ಪಿಜಿ ಐಜಿ, ಭದ್ರತೆಗೆ ಅನುಕೂಲವಾಗುವಂತೆ ಪ್ರಧಾನಿ ಸಾಗುವ ಮಾರ್ಗದಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಅನಧಿಕೃತ ಬ್ಯಾನರ್, ಬಂಟಿಂಗ್ಸ್ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಯಾತ್ರಿ ನಿವಾಸದಲ್ಲಿ ಬುಕ್ಕಿಂಗ್ ಬಂದ್
ಕೃಷ್ಣ ಮಠದ ಸುತ್ತಮುತ್ತಲಿನ ವಸತಿಗೃಹದಲ್ಲಿ ಮಂಗಳವಾರ ರಾತ್ರಿಯಿಂದಲೇ ಎಲ್ಲಾ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ಸಾಗುವ ಮಾರ್ಗದಲ್ಲಿರುವ ಎಲ್ಲಾ ಅಂಗಡಿಮುಂಗಟ್ಟುಗಳು, ರಥಬೀದಿಯಲ್ಲಿರುವ ಅಂಗಡಿಗಳನ್ನು ಶುಕ್ರವಾರ ಬಂದ್ ಮಾಡುವಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದಾರೆ.
ದುರಸ್ತಿ ಕಾರ್ಯ ತಾತ್ಕಾಲಿಕ ಸ್ಥಗಿತ
ಉಡುಪಿ ನಗರ ವ್ಯಾಪ್ತಿಯೊಳಗಿನ ಎನ್.ಹೆಚ್-66 ಮತ್ತು ಸಂಪರ್ಕ ರಸ್ತೆಗಳ ಮೇಲೆ ನಡೆಯುತ್ತಿರುವ ಎಲ್ಲಾ ಭೂಮಿ ಅಗೆಯುವ, ಕೊರೆಯುವ, ತೋಡುವ ಹಾಗೂ ಗುಂಡಿ ತೋಡುವ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧ ಆದೇಶವು ನ. 28ರ ಸಂಜೆ 5ರ ವರೆಗೆ ಜಾರಿಯಲ್ಲಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮೀನುಗಾರಿಕಾ ಚಟುವಟಿಕೆ ಬೇಗ ಮುಕ್ತಾಯಕ್ಕೆ ಮನವಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಳಿಸುವಂತೆ ಮಲ್ಪೆ ಮೀನುಗಾರರ ಸಂಘಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ದೇಶದ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ಆರಂಭಿಸಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಸಾಗರ ಮಾಲಾ ಯೋಜನೆಗಳ ಮೂಲಕ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಪ್ರಧಾನಿಗಳನ್ನು ಸಮಸ್ತ ಮೀನುಗಾರರು ಸಂಭ್ರಮದಿಂದ ಸ್ವಾಗತಿಸಲು ಮೀನುಗಾರಿಕಾ ಚಟುವಟಿಕೆಯನ್ನು ಮುಕ್ತಾಯಗೊಳಿಸಿ ಸಹಕಾರ ನೀಡುವಂತೆ ತಿಳಿಸಿದ್ದಾರೆ.