ಕನಕನ ಕಿಂಡಿಗೆ ಅಳವಡಿಸಿದ ಸುವರ್ಣ ಕವಚವನ್ನು ನರೇಂದ್ರ ಮೋದಿ ಉದ್ಘಾಟಿಸಿದರು. 
ಉಡುಪಿ

ಪ್ರಧಾನಿಯಾಗಿ ಮೊದಲ ಬಾರಿಗೆ ಕೃಷ್ಣ ದರ್ಶನಗೈದ ಮೋದಿ

ಉಡುಪಿ: ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ ಶುಕ್ರವಾರ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನಗೈದರು.

ಮಧ್ಯಾಹ್ನ 12 ಗಂಟೆಗೆ ರಥಬೀದಿಗೆ ಆಗಮಿಸಿದ ಮೋದಿ ಪ್ರಥಮತ: ಕನಕ ಗುಡಿಯಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ಕನಕನ ಕಿಂಡಿಗೆ ಅಳವಡಿಸಿದ ಸುವರ್ಣ ಕವಚವನ್ನು ಉದ್ಘಾಟಿಸಿ ದೇವರ ದರ್ಶನ ಮಾಡಿದರು. ನಂತರ ಪಂಚವಾದ್ಯಗಳೊಂದಿಗೆ ಪ್ರಧಾನಿಯವರನ್ನು ಕೃಷ್ಣ ಮಠದೊಳಗೆ ಬರಮಾಡಿಕೊಳ್ಳಲಾಯಿತು. ನವಗ್ರಹ ಕಿಂಡಿ ಮೂಲಕ ಪಾರ್ಥಸಾರಥಿ ಅಲಂಕಾರದಲ್ಲಿದ್ದ ಕೃಷ್ಣ ದೇವರ ದರ್ಶನಗೈದು, ನೂತನವಾಗಿ ನಿರ್ಮಿಸಿದ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಿದರು. ಬಳಿಕ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಕೃಷ್ಣ ಪ್ರಸಾದ ಹಾಗೂ ಭಗವದ್ಗೀತೆ ಲೇಖನ ದೀೆ ಸ್ವೀಕರಿಸಿದರು. ನಂತರ ಗೀತಾ ಮಂದಿರಕ್ಕೆ ಆಗಮಿಸಿ, ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು. ಅಲ್ಲಿಂದ ವಾದಿರಾಜ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ತಾಳೆಗರಿ ಗ್ರಂಥಗಳನ್ನು ಹಾಗೂ ಭಗವದ್ಗೀತೆ ಕೆತ್ತನೆಯನ್ನು ವೀಸಿದರು. ಮಠದೊಳಗೆ ಮೋದಿಯವರು ಸಾಗುವ ದಾರಿಯುದ್ದಕ್ಕೂ ಮಂಗಳವಾದ್ಯಗಳು, ವಿದ್ವಾಂಸರಿಂದ ಭಗವದ್ಗೀತೆ, ವೇದ, ಉಪನಿಷತ್​ ಪಾರಾಯಣ ನಡೆಯಿತು.
ಪ್ರಧಾನಿ ಹಣೆಯಲ್ಲಿ ಅಕ್ಷತೆ ಅಂಗಾರಕ ತಿಲಕ
ಚಂದ್ರಶಾಲೆಯಲ್ಲಿ ಪ್ರಧಾನಿಯವರು ಕೃಷ್ಣ ಪ್ರಸಾದ ಸ್ವೀಕರಿಸಿದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪಂಚಮುದ್ರೆ, ಗೋಪಿಚಂದನ, ಪಂಚಗಜ್ಜಾಯ, ದೇವರ ಗಂಧ, ನಿರ್ಮಾಲ್ಯವನ್ನು ನೀಡಿ ಹರಿಸಿದರು. ಜೊತೆಗೆ ಮಾಧ್ವ ಸಂಪ್ರದಾಯದ ಹೆಗ್ಗುರುತು ಅಕ್ಷತಾ ಮತ್ತು ಅಂಗಾರಕ ತಿಲಕವನ್ನು ಶ್ರೀಗಳು ಪ್ರಧಾನಿ ಹಣೆಗೆ ಹಚ್ಚಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಭಾವೀ ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ದಿವಾನ್​ ನಾಗರಾಜ ಆಚಾರ್ಯ, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸಹಕರಿಸಿದರು.