ಗಾಂಧಿನಗರ ಶಾಲೆಯಲ್ಲಿ ಶೂನ್ಯತ್ಯಾಜ್ಯ ಪರಿಕಲ್ಪನೆಯೊಂದಿಗೆ ಮಕ್ಕಳ ಸಂತೆಯನ್ನು ಆಯೋಜಿಸಲಾಯಿತು. 
ಉಡುಪಿ

ಪ್ಲಾಸ್ಟಿಕ್ ಮುಕ್ತ ಮಕ್ಕಳ ಸಂತೆ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಾಂಧಿನಗರ ಸರ್ಕಾರಿ ಪ್ರಾಥಮಿಕ ಶಾಲೆಯ ಶೂನ್ಯ ತ್ಯಾಜ್ಯ ಮಕ್ಕಳ ಸಂತೆ ಗಮನ ಸೆಳೆಯಿತು. ಮೂಡುಬಿದಿರೆಯ ಪುರಸಭೆ ವ್ಯಾಪ್ತಿಯ ಗಾಂಧಿನಗರ ದ.ಕ. ಜಿಪಞ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಂತೆ ಹಾಗೂ ಮೆಟ್ರಿಕ್ ಮೇಳ ಕೇವಲ ವ್ಯಾಪಾರ ಚಟುವಟಿಕೆಗೆ ಸೀಮಿತವಾಗದೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರಸ್ತುತಪಡಿಸುವ ವಿಶಿಷ್ಟ ಕಾರ್ಯಕ್ರಮವಾಯಿತು.
ವಿದ್ಯಾರ್ಥಿಗಳು ವ್ಯಾಪಾರ ಜ್ಞಾನ ಮಾತ್ರವಲ್ಲದೆ ರೈತರ ಪರಿಶ್ರಮದ ಮೌಲ್ಯವನ್ನೂ ಅರಿಯುವ ಅವಕಾಶ ಸಂತೆಯಲ್ಲಿ ಪಡೆದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆ ಪುರಸಭೆ ಪರಿಸರ ಅಭಿಯಂತೆ ಶಿಲ್ಪಾ ಎಸ್., ಮನೆಯಲ್ಲಿ ಹಾಗೂ ದಿನನಿತ್ಯದ ಚಟುವಟಿಕೆಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಬೇಕು. ಶೂನ್ಯತ್ಯಾಜ್ಯ ಜೀವನಶೈಲಿಯನ್ನು ಶಾಲಾ ಹಂತದಿಂದಲೇ ರೂಢಿಸಿಕೊಳ್ಳುವುದು ಶ್ಲಾಘನೀಯ ಎಂದರು.
ಸಾಹಸ್ ಎನ್‌ಜಿಒ ಪ್ರತಿನಿಧಿ ಶ್ರವಣ್, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಹಳೇ ವಿದ್ಯಾರ್ಥಿಗಳು ಭಾಗವಹಿಸಿದರು. ಪುರಸಭೆಯ ಸಹಕಾರದೊಂದಿಗೆ ಸಾಹಸ್ ಸಂಸ್ಥೆ- ಎಚ್‌ಡಿಎಫ್‌ಸಿ ವತಿಯಿಂದ ಮಕ್ಕಳಿಗೆ ಉಚಿತ ಬಟ್ಟೆಚೀಲಗಳನ್ನು ವಿತರಿಸಲಾಯಿತು. ಶೂನ್ಯ ತ್ಯಾಜ್ಯ ಮಕ್ಕಳ ಸಂತೆ ಹಾಗೂ ವಿಜ್ಞಾನ ಮೇಳದ ಸೆಲ್ಫಿ ಬೂತ್ ಗಮನ ಸೆಳೆಯಿತು.

ಸಾವಯವ ತರಕಾರಿಗೆ ಬೇಡಿಕೆ

ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯ ತೋಟಗಳಲ್ಲಿ ಬೆಳೆದ ಸಾವಯವ ತರಕಾರಿ, ಸೊಪ್ಪುಗಳು ಹಾಗೂ ಮನೆಯಲ್ಲೇ ತಯಾರಿಸಿದ ತಿಂಡಿ-ತಿನಿಸುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಸ್ಥಳೀಯವಾಗಿ ಬೆಳೆದ ಈ ಉತ್ಪನ್ನಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸಂತೆ ಭರಾಟೆಯ ವ್ಯಾಪಾರ ಕಂಡಿತು.