ಉಡುಪಿ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗಿಡ ವಿತರಿಸಲಾಯಿತು. ಮಹಮ್ಮದ್​ ಜುನೈದ್​, ಕೇಶವ ಪೂಜಾರಿ, ಅನುರಾಧಾ ಪಿ. ಶೆಟ್ಟಿ, ಚಂದ್ರಾವತಿ ಎಸ್​. ಭಂಡಾರಿ, ಯು.ಪದ್ಮನಾಭ ಕಾಮತ್​, ನಾಗೇಶ್​ ಕುಮಾರ್​ ಉದ್ಯಾವರ, ಗಿರೀಶ್​ ಗುಡ್ಡೆಯಂಗಡಿ ಇದ್ದರು. 
ಉಡುಪಿ

ನಮಗಾಗಿ ಮರಗಳ ರಕ್ಷಿಸಿಕೊಳ್ಳೋಣ

* ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ಕಿವಿಮಾತು

* ಉದ್ಯಾವರದಲ್ಲಿ ವಿದ್ಯಾರ್ಥಿಗಳಿಗೆ ಗಿಡ ವಿತರಣೆ

ಉಡುಪಿ: ನಮ್ಮೆಲ್ಲರ ಉಸಿರಾಟಕ್ಕೆ ಬೇಕಾದ ಆಮ್ಲಜನಕ ಗಿಡ-ಮರಗಳಿಂದ ಲಭಿಸುತ್ತದೆ. ಆದರೆ, ಈ ವಿಚಾರ ಅರಿಯದೆ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುತ್ತಲೇ ಇದ್ದೇವೆ. ಪ್ರಕೃತಿ ನಾಶವಾದರೆ ಎಲ್ಲವೂ ಅಂತ್ಯವಾಗಲಿದೆ. ನಮ್ಮ ರಕ್ಷಣೆಗಾಗಿ ಮರಗಳನ್ನು ರಕ್ಷಿಸಬೇಕು. ಪ್ರತಿ ವಿದ್ಯಾರ್ಥಿಯೂ ಗಿಡ ನೆಟ್ಟು ಮೂರು ವರ್ಷ ಜಾಗ್ರತೆಯಿಂದ ಆರೈಕೆ ಮಾಡಿದರೆ ಅದು ಮರವಾಗಿ ಬೆಳೆದು ನೂರು ವರ್ಷ ನಮ್ಮನ್ನು ರಕ್ಷಿಸುತ್ತದೆ ಎಂದು ಉಡುಪಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ತಿಳಿಸಿದರು.
ಉಡುಪಿಯ ಉದ್ಯಾವರದಲ್ಲಿರುವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಾಗವಾನಿ ಗಿಡ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇ.20 ಕಾಡು ನಾಶ
ದೇಶದಲ್ಲಿ ಸ್ವಾತಂತ್ರ್ಯ ಲಭಿಸುವ ವೇಳೆ ಶೇ.44 ಕಾಡು ಪ್ರದೇಶವಿದ್ದು ಅದೀಗ ಶೇ.24ಕ್ಕೆ ಇಳಿದಿದೆ. ಕರ್ನಾಟಕದಲ್ಲಿಯೂ ಸಹ ಶೇ.20ಕ್ಕಿಂತ ಕಡಿಮೆ ಕಾಡು ಪ್ರದೇಶವಿದೆ. ಪ್ರಕೃತಿಯಲ್ಲಿ ಆಗುತ್ತಿರುವ ಈ ಅಸಮತೋಲನ ಸರಿಪಡಿಸಲು ನಾವೆಲ್ಲ ಬದ್ಧರಾಗೋಣ. ನಾವು ಅಂದಾಗ ಜವಾಬ್ದಾರಿ ಹಂಚಿ ಹೋಗುತ್ತದೆ. ಹಾಗಾಗಿ ನಾನು ಪರಿಸರ ರಕ್ಷಿಸುತ್ತೇನೆ ಎಂದು ನಿರ್ಧರಿಸಬೇಕು ಎಂದರು.
ಉಡುಪಿ ಉಪ ಅರಣ್ಯಾಧಿಕಾರಿ ಮಹಮ್ಮದ್​ ಜುನೈದ್​, ಶಾಲಾ ಮುಖ್ಯ ಶಿಕ್ಷಕಿ ಅನುರಾಧಾ ಪಿ. ಶೆಟ್ಟಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್​. ಭಂಡಾರಿ, ಯು.ಪದ್ಮನಾಭ ಕಾಮತ್​ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್​ ಗುಡ್ಡೆಯಂಗಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಿಯಾಝ್​ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನೂಪ್​ ಕುಮಾರ್​ ಕಾರ್ಯಕ್ರಮ ನಿರ್ವಹಿಸಿದರು.
ಕೋಶಾಧಿಕಾರಿ ಸತೀಶ್​ ಡಿ. ಸಾಲ್ಯಾನ್​, ಉಪಾಧ್ಯಕ್ಷ ಶ್ರೀಧರ್​ ಮಾಬಿಯಾನ್​, ಕಾರ್ಯದರ್ಶಿ ಭಾಸ್ಕರ್​ ಬಂಗೇರ, ಗ್ರಾಪಂ ಮಾಜಿ ಸದಸ್ಯರಾದ ನಿತಿನ್​ ಜೆ. ಸಾಲ್ಯಾನ್​, ಆಬಿದ್​ ಅಲಿ, ಸದಸ್ಯ ಪ್ರೇಮ್​ ಮಿನೇಜಸ್​ ಮತ್ತು ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. 150 ವಿದ್ಯಾರ್ಥಿಗಳಿಗೆ ಗಿಡ  ವಿತರಿಸಲಾಯಿತು.
"

ಆಧುನೀಕರಣದ ಭರಾಟೆಯಿಂದ ಪರಿಸರ ಹಾನಿಯಾಗುತ್ತಿದೆ. ಮಕ್ಕಳೆಲ್ಲರೂ ಗಿಡ ನೆಟ್ಟು ರಕ್ಷಿಸಬೇಕು. ನಮ್ಮ ಸಂಸ್ಥೆ ಹಲವು ವರ್ಷದಿಂದ ಗಿಡ ವಿತರಿಸುತ್ತಿದ್ದು, ವರ್ಷದ ಬಳಿಕ ನಮ್ಮ ಸದಸ್ಯರು ಎಲ್ಲ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು ಉತ್ತಮವಾಗಿ ಗಿಡ ಬೆಳೆಸಿದವರಿಗೆ ಬಹುಮಾನ ನೀಡುತ್ತಿದ್ದೇವೆ. ಗಿಡ ನೆಟ್ಟು ಪ್ರೀತಿಯಿಂದ ಬೆಳೆಸಿದರೆ ಅದು ಮರವಾಗಿ ನಮ್ಮನ್ನು ರಕ್ಷಿಸುತ್ತದೆ.

— ನಾಗೇಶ್​ ಕುಮಾರ್​. ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ಗೌರವಾಧ್ಯಕ್ಷ.