ಕೊಕ್ಕರ್ಣೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ನಿಖರವಾದ ಬೆಳೆ ವಿವರಗಳನ್ನು ದಾಖಲಿಸುವ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಕ್ಷಮಾ ಪಾಟೀಲ್, ಶ್ರೀಧರ್ ವಿ.ಶೆಟ್ಟಿ ಆರೂರು ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಬೆಳೆ ಸಮೀಕ್ಷೆ ದಾಖಲೆ ಲೋಪ ಪರಿಹರಿಸಲು ಯೋಜನೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಪ್ರತಿ ಬಾರಿ ಬೆಳೆ ವಿಮೆ ಯೋಜನೆಗೆ ಕಾರ್ಯವ್ಯಾಪ್ತಿಯ ರೈತರ ಬೆಳೆಗಳನ್ನು ಸೇರಿಸಲು ಬೆಳೆ ಸಮೀಕ್ಷೆಯ ದಾಖಲೆಗಳಲ್ಲಿನ ಲೋಪ ಕಾರಣವಾಗಿ ಹಲವರು ಯೋಜನೆಯಿಂದ ವಂಚಿತರಾಗುವುದು ಸಂಘದ ಆಡಳಿತ ಮಂಡಳಿ ಗಮನಕ್ಕೆ ಬಂದಿದೆ. ಬೆಳೆ ಸಮೀಕ್ಷೆಗೆ ರೈತರಿಗೆ ಸರಿಯಾದ ಸಹಕಾರ, ಮಾರ್ಗದರ್ಶನ ನೀಡಿ ಮಿಶ್ರ ಬೆಳೆಗಳನ್ನು ಒಳಗೊಂಡಂತೆ ನೈಜ ಬೆಳೆಯ ಸಮೀಕ್ಷೆಯಾಗುವಂತೆ ನೋಡಿಕೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಹೇಳಿದರು.
ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಸಂಸ್ಥೆ ಆಯ್ಕೆ ಮಾಡಿಕೊಂಡಿರುವವರಿಗೆ ಮೊಬೈಲ್ ಆ್ಯಪ್ ಮೂಲಕ ನಿಖರವಾದ ಬೆಳೆ ವಿವರಗಳನ್ನು ದಾಖಲಿಸುವ ಬಗ್ಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಟಿಎಪಿಸಿಎಂಎಸ್‌ನ ನಿರ್ದೇಶಕ ಶ್ರೀಧರ್ ವಿ.ಶೆಟ್ಟಿ ಆರೂರು ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯವ್ಯಾಪ್ತಿಯ ಕೃಷಿಕರೊಬ್ಬರ ತೋಟಕ್ಕೆ ಅಧಿಕಾರಿಗಳು ಮತ್ತು ತರಬೇತಿ ನಿರತರು ಭೇಟಿ ನೀಡಿದರು. ಈ ಸಂದರ್ಭ ಸ್ಥಳದಲ್ಲೇ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.