ಆಲಂಕಾರು-ಪರಕ್ಕಾಲು ಡಾಮರೀಕರಣ ರಸ್ತೆ ಉದ್ಘಾಟಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ವೆಂಕಟ್ ವಳಲಂಬೆ, ಪ್ರಸನ್ನ ಮಾರ್ತ, ಭರತ್, ಚೋಮು ಮೊದಲಾದವರು ಉಪಸ್ಥಿತರಿದ್ದರು.
ಕಡಬ: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢಗೊಳಿಸಿದಾಗ ನಮ್ಮ ದೇಶ ವಿಶ್ವದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಕಾರ್ಯೋನ್ಮುಖರಾಗಿದ್ದಾರೆ. ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ಅನೇಕ ಜನಕಲ್ಯಾಣ ಯೋಜನೆ ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ ಯೋಜನೆಯಡಿಯಲ್ಲಿ ಆಲಂಕಾರು, ಹಳೆನೇರೆಂಕಿ, ಪೆರಾಬೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಆಲಂಕಾರು-ಹಳೇನೇರಿಂಕಿ ಗ್ರಾಮದ ಪರಕ್ಕಾಲುವರೆಗೆ 2.75 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣಗೊಂಡ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿದರು. ಗುತ್ತ್ತಿಗೆದಾರರನ್ನು, ಇಂಜಿನಿಯಾರ್‌ಗಳನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ದಿಶಾ ಕಮಿಟಿ ಸದಸ್ಯ ಭರತ್, ಕೊರಗ ಸಮುದಾಯದ ಹಿರಿಯ ಮಹಿಳೆ ಚೋಮು, ಬಿಜೆಪಿ ಕೊಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಬಿಜೆಪಿ ಮಂಡಲ ಉಪಾಧ್ಯಕ್ಷೆ ತೇಜಶ್ವಿನಿ ಕಟ್ಟಪುಣಿ ಉಪಸ್ಥಿತರಿದ್ದರು.
ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿದರು. ಹಳೆನೇರೆಂಕಿ ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ವಂದಿಸಿದರು. ಜಿಲ್ಲಾ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಪೂವಪ್ಪ ನಾಯ್ಕ ನಿರೂಪಿಸಿದರು.