ಸಾಂದರ್ಭಿಕ ಚಿತ್ರ 
ಉಡುಪಿ

ಶಾಲೆಗಳ ದುರಸ್ತಿಗೆ ಮೀನಮೇಷ!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ. ಮಳೆಗಾಲವೂ ಸನ್ನಿಹಿತವಾಗಿದೆ. ಚಿಣ್ಣರು ಕೂಡ ಹುರುಪಿನಿಂದ ಶಾಲೆಗೆ ಬರಲು ಸಜ್ಜಾಗುತ್ತಿದ್ದಾರೆ. ಆದರೆ ಕುಂದಾಪುರ ಶೈಕ್ಷಣಿಕ ವಲಯದ ಕೆಲವು ಶಾಲೆಗಳಲ್ಲಿ ದುರಸ್ತಿಯಾಗಿದ್ದು, ಇನ್ನು ಹಲವಾರು ಶಾಲೆಗಳಲ್ಲಿ ಕೊಠಡಿ, ಆವರಣ, ಶಾಲೆಯ ಮಾಡು ದುರಸ್ತಿ ಸಹಿತ ಹಲವು ಕೆಲಸಗಳು ಇನ್ನೂ ಆಗಿಲ್ಲ.
ಮಕ್ಕಳು ಶಾಲೆಗೆ ಬರುವ ಮೊದಲು ಶಾಲಾ ಕಟ್ಟಡಗಳ ದೃಢತೆ, ಸುರಕ್ಷೆಯನ್ನು ನೋಡಬೇಕಾಗಿದೆ. ಕೆಲವು ಸರ್ಕಾರಿ ಶಾಲಾ ಕಟ್ಟಡಗಳು ಕಳೆದ ಶೈಕ್ಷಣಿಕ ಅವಧಿಯಲ್ಲಿಯೇ ಶಿಥಿಲವಾಗಿದ್ದವು. ಸುಮಾರು ಒಂದೂವರೆ ತಿಂಗಳ ಬೇಸಿಗೆಯ ರಜೆಯಲ್ಲಿ ಅಂತಹ ಕೊಠಡಿಗಳನ್ನು ದುರಸ್ತಿ ಮಾಡಬೇಕಿತ್ತು. ಆದರೆ ಬಹುತೇಕ ಶಾಲೆಗಳಲ್ಲಿ ಆ ಕಾರ್ಯ ಆಗಿಲ್ಲ.
ಕುಂದಾಪುರ ವಲಯದ ವಿವಿಧ ಶಾಲೆಗಳ ಛಾವಣಿ, ಕಿಟಕಿ, ಬಾಗಿಲು, ನೆಲ, ಇನ್ನಿತರ ದುರಸ್ತಿ ಕಾಮಗಾರಿಗಳಿಗಾಗಿ ಒಟ್ಟಾರೆ ಸುಮಾರು 45 ಲಕ್ಷ ರೂ. ಅನುದಾನಕ್ಕೆ ಬೇಡಿಕೆಯನ್ನು ಈಗಾಗಲೇ ಶಿಕ್ಷಣ ಇಲಾಖೆಯಿಂದ ತಾಲೂಕು ಪಂಚಾಯಿತಿಗೆ ಸಲ್ಲಿಸಲಾಗಿದೆ. ಅಲ್ಲಿಂದ ಅನುದಾನ ತ್ವರಿತಗತಿಯಲ್ಲಿ ಬಿಡುಗಡೆಯಾದರೆ ಶಾಲಾರಂಭಕ್ಕೆ ಮುನ್ನ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ಪೂರೈಸಲು ಅನುಕೂಲವಾಗಲಿದೆ.

19 ಸ್ಕೂಲ್‌ಗಳಿಂದ ಬೇಡಿಕೆಗಳು

ಕುಂದಾಪುರ ವಲಯದಲ್ಲಿ 119 ಪ್ರಾಥಮಿಕ ಹಾಗೂ 20 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟು 19 ಶಾಲೆಗಳಿಂದ ವಿವಿಧ ಬೇಡಿಕೆಗಳು ಬಂದಿವೆ. ಅವುಗಳಲ್ಲಿ ಪ್ರಮುಖವಾಗಿ ಮೂಡು ಹಾಲಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುದೂರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಡ, ಛಾವಣಿ ದುರಸ್ತಿ ತುರ್ತಾಗಿ ಆಗಬೇಕಿದೆ. ಇನ್ನು ಹಟ್ಟಿಕುದ್ರು ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕನ್‌ಸಾಲ್ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ ಮತ್ಯಾಡಿ ಹಿರಿಯ ಪ್ರಾಥಮಿಕ ಶಾಲೆ, ರಟ್ಟಾಡಿ ಹಿರಿಯ ಪ್ರಾಥಮಿಕ ಶಾಲೆ, ನಡಂಬೂರು ಶಾಲೆ, ಹೊಸ ಬಡಾಕೆರೆ ಶಾಲೆ, ಸೂರ್ಗೋಳಿ ಶಾಲೆ, ಕುಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾರ್ದಳ್ಳಿ ಮಂಡಳ್ಳಿ ಶಾಲೆ, ಗೋಳಿಯಂಗಡಿ ಕಿರಿಯ ಪ್ರಾಥಮಿಕ ಶಾಲೆ, ಜಡ್ಡಿನಗದ್ದೆ ಹಿರಿಯ ಪ್ರಾಥಮಿಕ ಶಾಲೆ, ತಾರೆಕೊಡ್ಲು ಕಿರಿಯ ಪ್ರಾಥಮಿಕ ಶಾಲೆ, ಚಿತ್ತೇರಿ ಹಿರಿಯ ಪ್ರಾಥಮಿಕ ಶಾಲೆ, ಜಾಂಬೂರು ಹಿರಿಯ ಪ್ರಾಥಮಿಕ ಶಾಲೆ, ಉಳ್ಳೂರು 74 ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಂಕರನಾರಾಯಣ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೆಲ, ಕಿಟಕಿ, ಶೌಚಗೃಹ ಇನ್ನಿತರ ದುರಸ್ತಿ ಬೇಡಿಕೆಗಳು ಬಂದಿವೆ.

ಮೂಡು ಹಾಲಾಡಿ, ಮುದೂರಿ ಶಾಲೆ ಹಾಗೂ ಇತರ ಶಾಲೆಗಳ ಸಣ್ಣಪುಟ್ಟ ದುರಸ್ತಿ ಬಗ್ಗೆ ಈಗಾಗಲೇ ತಾಲೂಕು ಪಂಚಾಯಿತಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಎಸ್‌ಡಿಎಂಸಿ ಹಾಗೂ ಊರ ದಾನಿಗಳ ನೆರವಿನೊಂದಿಗೆ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲಾರಂಭಕ್ಕೆ ಬೇಕಾದ ಪೂರ್ವಸಿದ್ಧತೆ ಬಗ್ಗೆ ಮುಖ್ಯ ಶಿಕ್ಷಕರ ಸಭೆ ಆಯೋಜಿಸಲಾಗಿದೆ.

— ಶೋಭಾ ಶೆಟ್ಟಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ