ಬ್ರಹ್ಮಾವರ ಸಾಲಿಕೇರಿ ಹೊನ್ನಾಳ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿರುವುದು. 
ಉಡುಪಿ

ರಸ್ತೆ ಅಭಿವೃದ್ಧಿಗೆ ಮೀನಮೇಷ!

ಇಂದಿರಾ ಎನ್ ಕೆ

ಶಿವರಾಮ ಆಚಾರ್ಯ ಬಂಡೀಮಠ ಬ್ರಹ್ಮಾವರ

ಬ್ರಹ್ಮಾವರ- ಸಾಲಿಕೇರಿ- ಹೊನ್ನಾಳ ರಸ್ತೆ ತೀರಾ ಹದಗೆಟ್ಟು ಹೊಂಡ ಗುಂಡಿಗಳೇ ತುಂಬಿ ಬಸ್ ಸಹಿತ ಇತರ ವಾಹನಗಳ ಸುಗಮ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. 6 ಮಂದಿ ಸಂಸದರು, 5 ಮಂದಿ ಶಾಸಕರು ಚುನಾಯಿತರಾಗಿ ಬಂದರೂ ರಸ್ತೆ ಅಭಿವೃದ್ಧಿಗೆ ಮಾತ್ರ ಮೀನಮೇಷ ಎಣಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಹಳೆಯ ಬ್ರಹ್ಮಾವರ ಮತ್ತು ಈಗ ಉಡುಪಿ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಕಾಂಕ್ರೀಟ್ ಆಗುತ್ತಿದ್ದು, ಇಲ್ಲಿನ ಸಾರ್ವಜನಿಕರನ್ನು ಮಾತ್ರ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹಲವಾರು ಶಾಲಾ ಬಸ್, ಪ್ರಯಾಣಿಕರ ಬಸ್, ನೂರಾರು ಮನೆಗಳು, ದೇವಸ್ಥಾನ, ಕೈಗಾರಿಕಾ ಕೇಂದ್ರ ಇರುವ ಬ್ರಹ್ಮಾವರ- ಉಪ್ಪಿನಕೋಟೆ- ಸಾಲಿಕೇರಿ- ಹೊನ್ನಾಳ ರಸ್ತೆ ಅಭಿವೃದ್ಧಿ ಕಾಣದೆ ಅಯೋಮಯವಾಗಿದೆ ಎಂದು ಇಲ್ಲಿನ ಜನತೆ ಅಸಮಾಧಾನ ಹೊರಹಾಕಿದ್ದಾರೆ.

ನಿತ್ಯವೂ ಭಕ್ತರ ಪರದಾಟ

ಧಾರ್ಮಿಕ ಕೇಂದ್ರಗಳಾದ ಗರೋಡಿ, ನಾಗಬನ, ಕುವಾರ ಚಾವಡಿ, ಶ್ರೀ ಬ್ರಹ್ಮಲಿಂಗ, ವೀರಭದ್ರ, ದುರ್ಗಾಪರಮೇಶ್ವರೀ ದೇವಸ್ಥಾನ, ವೈದ್ಯನಾಥ ದೈವಸ್ಥಾನದಿಂದ ಹೊನ್ನಾಳ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವೆಂಬಂತಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಸಂಚರಿಸುವ ಭಕ್ತರು ನಿತ್ಯವೂ ಪರದಾಟ ನಡೆಸುವುದು ಇಲ್ಲಿ ಅನಿವಾರ್ಯ ಎಂಬಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೆ ನಡೆದಿದೆ ಸಿದ್ಧತೆ!

ವಾರಂಬಳ್ಳಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ರಸ್ತೆ ವಿಸ್ತರಣೆ ಮತ್ತು ಕಾಂಕ್ರೀಟ್ ವಾಡುವಂತೆ ಸಂಬಂಧಿಸಿದ ಇಲಾಖೆಗೆ ಅನೇಕ ವರ್ಷಗಳಿಂದ ಮನವಿ ವಾಡಿದರೂ ಇನ್ನೂ ಸ್ಪಂದನೆ ದೊರಕಿಲ್ಲ. ಸರ್ಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದಾಗಿ ಇಲ್ಲಿನ ಜನರು ಸಮಸ್ಯೆಗೀಡಾಗಿದ್ದು, ನಿರ್ಲಕ್ಷೃ ಧೋರಣೆ ಖಂಡಿಸಿ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜನಾಕ್ರೋಶ ಸ್ಫೋಟಗೊಳ್ಳುವವರೆಗೆ ವಿಳಂಬ ಧೋರಣೆ ಅನುಸರಿಸದೆ ಶೀಘ್ರ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿ;ಇದ್ದಾರೆ.

ಅಪಘಾತ ಸಂಭವಿಸುವ ಆತಂಕ

ಬೃಹದಾಕಾರ ಹೊಂಡಗಳು ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ. ಸರಿಯಾದ ನಿರ್ವಹಣೆಯಿಲ್ಲದ ರಸ್ತೆಗಳು ಮತ್ತು ಕಳಪೆ ಕಾಮಗಾರಿಯಿಂದಾಗಿ ಉಂಟಾಗುತ್ತಿರುವ ಹೊಂಡಗಳಿಂದ ಸಾರ್ವಜನಿಕರ ಸಂಕಷ್ಟ ಎದುರಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ರಾತ್ರಿ ವೇಳೆ ಹೊಂಡಗಳು ಗೋಚರಿಸದೆ ವಾಹನಗಳು ಪಲ್ಟಿಯಾದ ಉದಾಹಣೆಗಳು ಸಾಕಷ್ಟಿವೆ.

ಗರ್ಭಿಣಿಯರಿಗಿಲ್ಲಿ ಅಪಾಯ!

ಗರ್ಭಿಣಿಯರು ಮತ್ತು ಹಿರಿಯ ನಾಗರಿಕರಿಗೆ ಈ ರಸ್ತೆಗಳಲ್ಲಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿಯಾಗಿದೆ. ಹೊಂಡಗಳಿರುವ ರಸ್ತೆಯಲ್ಲಿ ಸಂಚರಿಸುವುದರಿಂದ ಇಲ್ಲಿನ ವಾಹನ ಸವಾರರು ಬೆನ್ನುನೋವು, ಕುತ್ತಿಗೆ ನೋವು ಮತ್ತು ನರಗಳ ಸಮಸ್ಯೆ ಎದುರಿಸುವಂತಾಗಿದೆ. ಹೊಂಡಗಳಲ್ಲಿ ವಾಹನಗಳಿಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದ್ದು, ವಾಹನ ವಾಲೀಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂಬುದು ಸ್ಥಳೀಯರ ಅಳಲು.

ಸಾಲಿಕೇರಿ ಹೊನ್ನಾಳ ರಸ್ತೆ ಈ ಹಿಂದೆ ಕಾಂಕ್ರೀಟ್ ರಸ್ತೆಯ ಪ್ರಸ್ತಾಪನೆಗೆ ಶಿಪಾರಸ್ಸಾಗಿದ್ದು, ಅದು ಮೀನುಗಾರಿಕಾ ಇಲಾಖೆಗೆ ಒಳಪಟ್ಟ ಕಾರಣ ರಸ್ತೆಯನ್ನು ವೀಕ್ಷಿಸಿದ ಅಧಿಕಾರಿಯೋರ್ವರು ರಸ್ತೆ ಚೆನ್ನಾಗಿದೆ ಎಂದು ವರದಿ ನೀಡಿದ ಕಾರಣ ನನೆಗುದಿಗೆ ಬಿದ್ದಿತ್ತು. ಇದೀಗ ಉಡುಪಿ ಶಾಸಕರಿಗೆ ಮನವಿ ಮಾಡಲಾಗಿದ್ದು, ಸರ್ಕಾರ ರಸ್ತೆ ನಿರ್ಮಾಣದ ಕುರಿತು ಅನುಮೋದನೆ ನೀಡುವ ಹಂತದಲ್ಲಿದೆ ಸಾಧ್ಯವಾದಷ್ಟು ಪ್ರಯತ್ನ ನಡೆಯುತ್ತಿದೆ.

— ಬಿರ್ತಿ ರಾಜೇಶ್ ಶೆಟ್ಟಿ ಸಾಮಾಜಿಕ ಮುಖಂಡ, ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ

ಪ್ರತಿ ಕಡೆಯಲ್ಲಿ ಹೊಂಡಗುಂಡಿಗಳು ತುಂಬಿದ್ದು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿದರೆ, ಬಿದ್ದು ಕೈಕಾಲು ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಆದಷ್ಟು ಬೇಗನೆ ರಸ್ತೆ ವಿಸ್ತರಣೆಯಾದರೆ ಉತ್ತಮ.

— ಭವಾನಿ ನಿರಂಜನ ಶೆಟ್ಟಿಗಾರ್ ಸಾಲೀಕೇರಿ