ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹರಿಣಾಕ್ಷಿ ದೇವಾಡಿಗ, ಸರಿತಾ ಶಿವಾನಂದ, ಶಶಿಕಲಾ, ಕಿರಣ್ ಆಳ್ವ ಇದ್ದರು. 
ಉಡುಪಿ

ಪೈಪ್‌ಲೈನ್ ಸಮಸ್ಯೆ ಜ. 5ರಂದು ವಿಶೇಷ ಸಭೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪುರಸಭೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಸಮಸ್ಯೆ ಕುರಿತಂತೆ ಜಲಮಂಡಳಿ, ವಾಟರ್‌ಮೆನ್, ಇಂಜಿನಿಯರಿಂಗ್ ವಿಭಾಗ ಹಾಗೂ ಸದಸ್ಯರೊಂದಿಗೆ ಜ.5ರಂದು ವಿಶೇಷ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲು ಮಂಗಳವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್ ದುರಸ್ತಿ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿ ಕುರಿತು ವಿಷಯ ಪ್ರಸ್ತಾಪಿಸಿದ ಸದಸ್ಯ ಅನಿಲ್ ಕುಮಾರ್, ಹೊಸ ಪೈಪ್‌ಲೈನ್ ಅಳವಡಿಸಿದ್ದರೂ ಮತ್ತೆ ದುರಸ್ತಿ ಮಾಡುವ ಅಗತ್ಯವೇನು? ಕೋಟ್ಯಂತರ ರೂ. ಖರ್ಚು ಮಾಡಿದರೂ ನೀರು ಪೋಲು ತಡೆಯಲು ಸಾಧ್ಯವಾಗಿಲ್ಲ ಎಂದು ದೂರಿದರು. ಫರ್ಜಾನ, ಸುರೇಶ್ ದೇವಾಡಿಗ, ಸತೀಶ್ಚಂದ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಧ್ವನಿಗೂಡಿಸಿದರು.
ಇಂದಿರಾ ಕ್ಯಾಂಟೀನ್‌ನಿಂದ ಪುರಸಭೆಗಿರುವ ಲಾಭವಾದರೂ ಏನು, ಅವರ ವಿದ್ಯುತ್ ಬಿಲ್ ಪಾವತಿ ಯಾಕೆ ಮಾಡಬೇಕೆಂದು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಇದೀಗ ಕ್ಯಾಂಟೀನ್‌ಗೆ ಸಿಸಿ ಕ್ಯಾಮರಾ ಅಳವಡಿಕೆಗೂ ನಮ್ಮಲ್ಲಿ ಬೇಡಿಕೆ ಸಲ್ಲಿಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು. ಇಂದಿರಾ ಕ್ಯಾಂಟೀನ್‌ಗೆ ಬದಲಾಗಿ ಪುರಸಭೆ ವ್ಯಾಪ್ತಿಯಲ್ಲಿನ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದರು. ಕ್ಯಾಂಟೀನ್‌ಗೆ ಪುರಸಭೆಯಿಂದ ಯಾವುದೇ ಸವಲತ್ತು ನೀಡದಂತೆ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ಸಂತಾಹರಣಕ್ಕೆ ಒಲ್ಲದ ಏಜೆನ್ಸಿಗಳು

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಹಾವಳಿ ಎಲ್ಲೆ ಮೀರಿದ್ದು, ಜನರು ಕಾಪುವಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು. ಆಶ್ರಯ ತಾಣ ನಿರ್ಮಿಸಲು ಶಿರ್ವದಲ್ಲಿ ಜಾಗ ಗುರುತಿಸಿರುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದು, ಗ್ರಾಮದ ಸರ್ವೇ ನಂ.62ರಲ್ಲಿ ತಾಲೂಕಿಗೆ 1 ಎಕರೆ ಹಾಗೂ ಪುರಸಭೆಗೆ 1 ಎಕರೆ ಜಾಗ ನೀಡುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ನಾಯಿಗಳ ಹಾವಳಿ ತಡೆಗೆ ಕ್ರಮವಹಿಸಲಾಗುವುದು ಎಂದು ಪ್ರಭಾರ ಮುಖ್ಯಾಧಿಕಾರಿ ಶಶಿಕಲಾ ತಿಳಿಸಿದರು. ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಅನುದಾನ ಮೀಸಲಿರಿಸಿ ಸೂಕ್ತ ದರಪಟ್ಟಿಯೊಂದಿಗೆ 3 ಬಾರಿ ಟೆಂಡರ್ ಆಹ್ವಾನಿಸಿದರೂ ಯಾವುದೇ ಏಜೆನ್ಸಿಗಳು ಬಿಡ್‌ನಲ್ಲಿ ಭಾಗವಹಿಸಲು ಮುಂದೆ ಬಂದಿಲ್ಲ ಎಂದು ಆರೋಗ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಅನಿಲ್ ಕುಮಾರ್ ಇದ್ದರು.

ನಿರ್ಮಾಣವಾಗದ ಎಸ್‌ಟಿಪಿ

ಪುರಸಭೆ ರಚನೆಗೊಂಡು 10 ವರ್ಷವಾದರೂ ಎಸ್‌ಟಿಪಿ ರಚನೆಯಾಗಾದಿರುವುದು ನಾಚಿಕೆಗೇಡಿನ ವಿಚಾರ. ಶಾಸಕರು, ಸಂಸದರು, ಕೌನ್ಸಿಲರ್‌ಗಳು ಬಂದು ಹೋಗಿದ್ದಾರೆ. ಯಾವ ಜಾಗಕ್ಕೂ ಬೆಂಬಲ ಸಿಕ್ಕಲಿಲ್ಲ. ಪೈಪ್‌ಲೈನ್ ಆಗಿದೆ. ಜಾಗ ತೋರಿಸಿದರೆ ಕೌನ್ಸಿಲರ್‌ಗಳಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದೆ. ಜಿಲ್ಲಾಧಿಕಾರಿಗಳಿಂದ ಸ್ಪಷ್ಟ ಆದೇಶ ಹೊರಡಿಸುವ ಅಗತ್ಯವಿದೆ ಎಂದು ಅಮೀರ್ ತಿಳಿಸಿದರು.

ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್

ಯೋಜನಾ ಪ್ರಾಧಿಕಾರ ಮೂಲಕ ಕೆರೆ, ಪಾರ್ಕ್ ಅಭಿವೃದ್ಧಿಗೆ ಅವಕಾಶವಿದೆ. ಕಾಪುವಿನಲ್ಲಿ ಸುಸಜ್ಜಿತ ಕ್ರೀಡಾಂಗಣ, ಪಾರ್ಕ್, ಕೆರೆಗಳ ಸುತ್ತ ವಾಕಿಂಗ್ ಟ್ರಾೃಕ್ ಇಲ್ಲದಿರುವುದು ಪುರಸಭೆ, ತಾಲೂಕು ಕೇಂದ್ರಕ್ಕೆ ಅವಮಾನ. ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾೃನ್ ಸಿದ್ಧಪಡಿಸುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.