ಉಡುಪಿಯ ಸಂತೆಕಟ್ಟೆ ಮಾರ್ಕೆಟ್​ ಹಿಂಭಾಗದ ರಸ್ತೆಯಲ್ಲಿ ಅನಾಗರಿಕರು ಎಸೆದಿರುವ ಕಸದ ರಾಶಿ. 
ಉಡುಪಿ

ಸಂತೆಕಟ್ಟೆಗೆ 'ಕಸ' ಕಾಟ

* ಮಾರ್ಕೆಟ್​ ಹಿಂಭಾಗದ ರಸ್ತೆಯಲ್ಲಿ ತ್ಯಾಜ್ಯ ರಾಶಿ

* ಮಾರ್ಗದ ಪರಿಸರದಲ್ಲಿ ಆವರಿಸಿದೆ ದುರ್ನಾತ

ಪ್ರಶಾಂತ ಭಾಗ್ವತ ಉಡುಪಿ
ಎಷ್ಟೇ ಜಾಗೃತಿ ಮೂಡಿಸಿದರೂ, ಸಾವಿರಾರು ರೂಪಾಯಿ ದಂಡ ಹಾಕಿದರೂ ತಮ್ಮ ಮನೆಯ ಕಸ&ತ್ಯಾಜ್ಯವನ್ನು ರಸ್ತೆಗೆ ಎಸೆದು ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಮುಖ್ಯರಸ್ತೆ ಸಂಪರ್ಕಿಸುವ ಒಳರಸ್ತೆ ಹಾಗೂ ಓಣಿಗಳಲ್ಲಿ ರಾಶಿ ಬಿದ್ದಿರುವ ಕಸಗಳು ಪರಿಸರದ ಅಂದ-ಸ್ವಾಸ್ಥ್ಯ ಹದಗೆಡಿಸುತ್ತಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಪುತ್ತೂರು ವಾರ್ಡ್​ನ ವಿವಿಧೆಡೆ ರಸ್ತೆಗಳ ಅಕ್ಕ-ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ ದುರ್ನಾತ ಬೀರುತ್ತಿದೆ. ಸಂತೆಕಟ್ಟೆ ಮಾರ್ಕೆಟ್​ ಹಿಂಭಾಗದ ರಸ್ತೆಯಂತೂ ಅನಾಗರಿಕರಿಗೆ ಕಸ ಎಸೆಯುವ ಜಾಗವಾಗಿ ಮಾರ್ಪಟ್ಟಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹಸಿ-ಒಣಕಸದೊಂದಿಗೆ ಪ್ಲಾಸ್ಟಿಕ್​ ತ್ಯಾಜ್ಯ ವಾಕರಿಕೆ ತರಿಸುತ್ತಿದೆ.
ಬೀದಿ ನಾಯಿಗಳ ಕಾಟ
ಸಂತೆಕಟ್ಟೆ ಮಾರ್ಕೆಟ್​ ಹಿಂಭಾಗದ ರಸ್ತೆಯಲ್ಲಿ ಮಾಂಸಗಳ ತ್ಯಾಜ್ಯವನ್ನೂ ತುಂಬಿದ ಪ್ಲಾಸ್ಟಿಕ್​ ಬ್ಯಾಗ್​ಗಳನ್ನು ಎಸೆಯುತ್ತಾರೆ. ಅದರಲ್ಲಿರುವ ಆಹಾರ ತಿನ್ನಲು ಬೀದಿನಾಯಿಗಳು ಬಂದು ಕವರ್​ಗಳನ್ನು ಎಳೆದು ರಸ್ತೆಗೆ ತಂದು ಹರಿದು ಚೆಲ್ಲಾಡಿ ತಿನ್ನುತ್ತವೆ. ಅಲ್ಲದೆ, ಈ ಮಾರ್ಗದಲ್ಲಿ ಸಾಗುವ ಅನೇಕ ಬೈಕ್​ ಸವಾರರು ಹಾಗೂ ಪಾದಚಾರಿಗಳು, ವಿದ್ಯಾರ್ಥಿಗಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ಬೆಳಗ್ಗೆ ವಾಕಿಂಗ್​ಗೆ ಬರುವ ಮಹಿಳೆಯರು, ಹಿರಿಯ ನಾಗರಿಕರನ್ನು ಅಲ್ಲಿರುವ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ.

ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು

ಈ ಭಾಗದಲ್ಲಿ ಪ್ರಭಾವಿ ಹಾಗೂ ದೊಡ್ಡ ದೊಡ್ಡ ರಾಜಕಾರಣಿಗಳೂ ಇದ್ದಾರೆ. ಇದೇ ರಸ್ತೆ ಮಾರ್ಗದಲ್ಲೇ ಕೆಲವು ರಾಜಕಾರಣಿಗಳು ದಿನವೂ ಕಾರಿನಲ್ಲಿ ಸಂಚರಿಸುತ್ತಾರೆ. ಅವರಿಗೂ ಸಹ ರಸ್ತೆಯ ಅಕ್ಕ&ಪಕ್ಕದಲ್ಲಿ ಎಸೆದಿರುವ ಕಸದ ರಾಶಿ ಗೋಚರಿಸುತ್ತದೆ. ಆದರೆ, ಯಾರೊಬ್ಬರೂ ಸಹ ಅಲ್ಲಿ ಕಸ ಎಸೆಯದಂತೆ ತಡೆಯಲು ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುತ್ತಾರೆ ಶ್ರೀರಾಮ ಪೂಜಾರಿ ಸಂತೆಕಟ್ಟೆ.

ಹದಗೆಟ್ಟಿದೆ ಶುಭ್ರ ಪರಿಸರ

ಸಂತೆಕಟ್ಟೆಯಲ್ಲಿ ಮೇಲ್ಸೇತುವೆ​ ಕಾಮಗಾರಿ ನಡೆದ ಸಂದರ್ಭದಲ್ಲಿ ಕಾರ್ಮಿಕರು ಇಲ್ಲೇ ಶೆಡ್​ ಕಟ್ಟಿಕೊಂಡಿದ್ದರು. ಸುತ್ತಮುತ್ತಲೂ ವಿವಿಧ ಫ್ಯಾಕ್ಟರಿ, ಶೋರೂಮ್​, ಸಿಮೆಂಟ್​ ಗೋದಾಮು, ವಿವಿಧ ಅಂಗಡಿಗಳೂ ಇದ್ದು ನೂರಾರು ಕಾರ್ಮಿಕರು ಇದ್ದಾರೆ. ಅನೇಕರು ಇದೇ ರಸ್ತೆ ಮಾರ್ಗದ ಬದಿಯಲ್ಲಿಯೇ ರಾತ್ರಿ ವೇಳೆ ಹಾಗೂ ನಸುಕಿನ ಅವಧಿಯಲ್ಲಿ 'ನಿತ್ಯಕರ್ಮ' ಮಾಡುತ್ತಿದ್ದಾರೆ. ಇದರಿಂದಲೂ ಸಹ ಇಲ್ಲಿನ ಪರಿಸರ ಹದಗೆಟ್ಟಿದೆ. ಸಮೀಪದಲ್ಲಿ ಮನೆ ಕಟ್ಟಿರುವ ಜನರಿಗೆ ಕಸದ ಗೋಳು ಕಾಡುತ್ತಿದೆ. ರಸ್ತೆಯೂ ಸಂಪೂರ್ಣ ಹಾಳಾಗಿದ್ದು ಹೊಂಡಮಯವಾಗಿದೆ ಎನ್ನುತ್ತಾರೆ ಅರುಣ್​ ಸಂತೆಕಟ್ಟೆ.

ಕಾದಿದೆ ವಿದ್ಯುತ್​ ಆಘಾತ!

ನೆಲಕ್ಕುರುಳುವ ಸ್ಥಿತಿಯಲ್ಲಿರುವ ವಿದ್ಯುತ್​ ಕಂಬ.
ಸಂತೆಕಟ್ಟೆ ಮಾರ್ಕೆಟ್​ ಹಿಂಭಾಗದ ರಸ್ತೆ ಮಾರ್ಗದಲ್ಲಿಯೇ ವಿದ್ಯುತ್​ ಕಂಬವೊಂದು ವಾಲಿದ್ದು ಇಂದೋ&ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಹೈಟೆನ್ಷನ್​ ಲೈನ್​ ಇದಾಗಿದ್ದು, ತಂತಿ ತುಂಡಾಗಿ ಬಿದ್ದರೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅಥವಾ ಪಾದಚಾರಿಗಳ ಜೀವಕ್ಕೆ ಕುತ್ತಾಗಲಿದೆ. ಕಳೆದ ಒಂದು ವಾರದಿಂದ ವಿಪರೀತ ಗಾಳಿ-ಮಳೆಯೂ ಬರುತ್ತಿದ್ದು ಈ ವಿದ್ಯುತ್​ ಕಂಬ ತುಂಡಾಗಿ ಬೀಳುವ ಸಾಧ್ಯತೆ ಇದೆ. ಮೆಸ್ಕಾಂ, ನಗರಸಭೆಯ ಅಧಿಕಾರಿಗಳು ಕೂಡಲೇ ಈ ಕಂಬವನ್ನು ಸರಿಪಡಿಸುವ ಅಥವಾ ಬದಲಿಸಲು ಕ್ರಮ ಕೈಗೊಂಡು ಮುಂದೆ ಆಗಬಹುದಾದ ಜೀವಹಾನಿ ತಡೆಯಬೇಕು ಎನ್ನುತ್ತಾರೆ ಕಿಶೋರ್​ ಅಮ್ಮಂಜಿ.
"

ಸಂತೆಕಟ್ಟೆ ಮಾರ್ಕೆಟ್​ ಹಿಂಭಾಗದ ರಸ್ತೆಯಲ್ಲಿ ಕಸದ ರಾಶಿಯಿಂದ ದುರ್ವಾಸನೆ ರಾಚುತ್ತಿದೆ. ಮನೆಗಳ ಕಸ, ಮಾಂಸಗಳ ತ್ಯಾಜ್ಯವನ್ನು ಈ ಮಾರ್ಗದಲ್ಲಿ ಸಾಗುವ ಅನ್ಯರು ಎಸೆಯುತ್ತಾರೆ. ಇಲ್ಲಿನ ಪರಿಸರ ಅಸ್ವಚ್ಛತೆಯಿಂದ ಕೂಡಿದೆ. ಮಳೆ ಸುರಿದರೆ ತ್ಯಾಜ್ಯಗಳಿರುವ ಪ್ಲಾಸ್ಟಿಕ್​ ಚೀಲಗಳು ನೀರಿನೊಂದಿಗೆ ಸಾಗಿ ಸ್ವರ್ಣ ನದಿ ಒಡಲು ಸೇರಲಿದೆ. ಕೂಡಲೇ ಇಲ್ಲಿನ ತ್ಯಾಜ್ಯ ತೆರವು ಮಾಡಿಸಬೇಕು. ಈ ಭಾಗದಲ್ಲಿ ಕ್ಯಾಮರಾ ಅಳವಡಿಸಿ, ಕಸ ಎಸೆಯುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.

— ಸತೀಶ್​ ಪೂಜಾರಿ ಕೀಳಂಜೆ. ಸಾಮಾಜಿಕ ಕಾರ್ಯಕರ್ತ.