ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಫಿಸಿಯೋಥೆರಪಿ ಕಿಟ್ ಹಸ್ತಾಂತರ ಕಾರ್ಯಕ್ರಮವನ್ನು ಡಾ. ಆವನಿ ಶೆಟ್ಟಿ ಉದ್ಘಾಟಿಸಿದರು. ಡಾ. ಎಚ್. ಅಶೋಕ್, ಡಾ. ಲತಾ ನಾಯಕ್, ಮುರಳಿ ರೈ, ಗಣೇಶ್ ರಾವ್, ಅರ್ಪಿತಾ ಇತರರಿದ್ದರು.
* ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್.ಅಶೋಕ್ ಮಾಹಿತಿ
* ಕಭೀ ಕಾರ್ಯಕ್ರಮದಡಿ ಫಿಸಿಯೋಥೆರಪಿ ಕಿಟ್ ಉದ್ಘಾಟನೆ
ಉಡುಪಿ: ಸರ್ಕಾರದ ಕಭೀ ಕಾರ್ಯಕ್ರಮದಡಿ ರೋಗಿಗಳಿಗೆ 'ಫಿಜಿಯೋಥೆರಪಿ' ಚಿಕ್ಸಿತೆ ಬಹಳ ಮುಖ್ಯವಾಗಿದೆ. ಈ ಕೆಲಸವು ಜಿಲ್ಲಾಸ್ಪತ್ರೆಯಲ್ಲಿರುವ ಬ್ರೈನ್ ಹೆಲ್ತ್ ಕ್ಲಿನಿಕ್ನಲ್ಲಿ ಗುಣಮಟ್ಟದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಇಂತಹ ರೋಗಿಗಳು ಉಪಯೋಗ ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಉಜ್ಜೀವನ್ ಸ್ಮಾಲ್ ಸ್ಕೇಲ್ ಫೈನಾನ್ಸ್ ಬ್ಯಾಂಕ್ನವರು ನೀಡಿರುವ ಕಿಟ್ ಇನ್ನಷ್ಟು ಸಹಾಯಕ ಆಗಲಿದೆ ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್. ಅಶೋಕ್ ತಿಳಿಸಿದರು.
ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬ್ರೈನ್ ಹೆಲ್ತ್ ಕ್ಲಿನಿಕ್ನ ಫಿಸಿಯೋಥೆರಪಿ ವಿಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ (ಕಭೀ), ಉಜ್ಜೀವನ್ ಸ್ಮಾಲ್ ಸ್ಕೇಲ್ ಫೈನಾನ್ಸ್ ಬ್ಯಾಂಕ್ ಇವರ ಸಹಭಾಗಿತ್ವದಲ್ಲಿ ಶನಿವಾರ (ಜು.18) ಆಯೋಜಿಸಿದ್ದ ಫಿಸಿಯೋಥೆರಪಿ ಕಿಟ್ ಉದ್ಘಾಟನೆ ಹಾಗೂ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಆಸ್ಪತ್ರೆಯ ಬ್ರೈನ್ ಹೆಲ್ತ್ ಕ್ಲಿನಿಕ್ನಲ್ಲಿ ಉಜ್ಜೀವನ್ ಸ್ಮಾಲ್ ಸ್ಕೇಲ್ ಫೈನಾನ್ಸ್ ಬ್ಯಾಂಕ್ ನೀಡಿರುವ ಉಪಕರಣಗಳ ಉದ್ಘಾಟನೆಯನ್ನು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ (ಕಭೀ)ದ ವೈದ್ಯಾಧಿಕಾರಿ ಡಾ. ಆವನಿ ಶೆಟ್ಟಿ ಉದ್ಘಾಟಿಸಿದರು.
ಉಜ್ಜೀವನ್ ಸ್ಮಾಲ್ ಸ್ಕೇಲ್ ಫೈನಾನ್ಸ್ ಬ್ಯಾಂಕ್ನ ಉಡುಪಿ ಪ್ರದೇಶ ವ್ಯವಸ್ಥಾಪಕ ಮುರಳಿ ರೈ ಅವರು ಕಿಟ್ ಹಸ್ತಾಂತರಿಸಿದರು. ಶಾಖಾ ವ್ಯವಸ್ಥಾಪಕ ಗಣೇಶ್ ರಾವ್ ಉಪಸ್ಥತರಿದ್ದರು.
ಬ್ಯಾಂಕ್ನವರಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಕಿಟ್ನ ಉದ್ಘಾಟನೆ ನಿಮಿತ್ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ಶ್ವವಾಯು ಪೀಡಿತ ರೋಗಿಗೆ ಥೆರಾ ಬ್ಯಾಂಡ್ ಹಾಗೂ ವೈಟ್ ಕಫ್ ಬಳಸಿ ಸಾಂಕೇತಿಕವಾಗಿ ಕಿಟ್ ಬಳಸಲಾಯಿತು. ಬಳಿಕ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಅರ್ಪಿತಾ ಕಾರ್ಯಕ್ರಮ ನಿರ್ವಹಿಸಿದರು.
"
ಕಭೀ ಕಾರ್ಯಕ್ರಮದಡಿ ನರವೈಜ್ಞಾನಿಕ ಕಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮೆನ್ಶಿಯಾದಂತಹ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ರೋಗಿಗಳಿಗೆ ಬೆಂಗಳೂರಿನ ನಿಮ್ಹಾನ್ಸ್ನಿಂದ ಟೆಲಿ ನ್ಯೂರೋಲಾಜಿ ಸೇವೆ ಒದಗಿಸಲಾಗುತ್ತದೆ. ಉಡುಪಿ ಜಿಲ್ಲೆಯ ಕಭೀ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
— ಡಾ. ಲತಾ ನಾಯಕ್. ಕಭೀ ಕಾರ್ಯಕ್ರಮದ ನೋಡಲ್ ಅಧಿಕಾರಿ.