ಉಡುಪಿ ಬಾರ್ಕೂರಿನ ಕಾಲೇಜ್​ನಲ್ಲಿ ಆಯೋಜಿಸಿದ್ದ ಕನಕದಾಸರ ಕುರಿತ ಉಪನ್ಯಾಸ ಮಾಲಿಕೆಯನ್ನು ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು. ಡಾ. ಎಸ್​. ಭಾಸ್ಕರ್​ ಶೆಟ್ಟಿ, ಡಾ. ಸುಬ್ರಹ್ಮಣ್ಯ ಕೆ. ಡಾ.ಕೃಷ್ಣರಾಜ ಕರಬ, ಡಾ. ಬಿ.ಜಗದೀಶ್​ ಶೆಟ್ಟಿ, ಡಾ. ಅರುಣಕುಮಾರ್​ ಎಸ್​.ಆರ್​., ಶೈಲಜಾ ಶೆಟ್ಟಿ, ಡಾ. ಪಲ್ಲವಿ ಎನ್​. ಇದ್ದರು. 
ಉಡುಪಿ

ಸರ್ವ ಸಮಾನತೆ ಪ್ರತಿಪಾದಿಸಿದ ತತ್ವಜ್ಞಾನಿ ಕನಕದಾಸ

* ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿಪ್ರಾಯ

* ಬಾರ್ಕೂರು ಕಾಲೇಜ್​ನಲ್ಲಿ ಉಪನ್ಯಾಸ ಮಾಲಿಕೆ ಉದ್ಘಾಟನೆ

ಉಡುಪಿ: ಕನಕದಾಸರು ಕೇವಲ ಸಂತರಷ್ಟೇ ಅಲ್ಲ. ಕವಿ, ತತ್ವಜ್ಞಾನಿ, ಸಂಗೀತಗಾರರೂ ಆಗಿದ್ದರು. ಸರ್ವ ಸಮಾನತೆಯನ್ನೇ ಬದುಕಿನ ಮೂಲ ಚಿಂತನೆಯಾಗಿಸಿ, ಅದರಂತೆಯೇ ಬದುಕಿದವರು. ಸಮಾಜದಲ್ಲಿ ಬದಲಾವಣೆಗಾಗಿ ಶ್ರಮಿಸಿದವರು. ಲೌಕಿಕದಲ್ಲೇ ಅಲೌಕಿಕವನ್ನು ಹುಡುಕುವ, ಅದಕ್ಕಾಗಿ ತನ್ನ ಜೀವನ ದಾರಿ ಸರಿಪಡಿಸಿಕೊಳ್ಳಲು ಪ್ರಾಯೋಗಿಕವಾಗಿ ಬದುಕಿ ಮಾದರಿಯಾದವರು ಎಂದು ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿಪ್ರಾಯಪಟ್ಟರು.

ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ವತಿಯಿಂದ ಬ್ರಹ್ಮಾವರದ ಬಾರ್ಕೂರಿನಲ್ಲಿರುವ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಸಭಾಂಗಣದಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಕನಕ ಸಾಹಿತ್ಯದಲ್ಲಿ ನೆಲ-ಜಲ; ಸಂಸ್ಕೃತಿ ಚಿಂತನೆ ವಿಷಯ ಕುರಿತ ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.

ಭೂಮಿ, ನೀರಿನ ಪ್ರತಿಪಾದನೆ

ಪುತ್ತೂರಿನ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ. ಮಾತನಾಡಿ, ಕನಕದಾಸರ ಕೀರ್ತನೆಗಳು ನೆಲ-ಜಲ ಹಾಗೂ ಪ್ರಕೃತಿಯ ರೂಪಕಗಳಾಗಿವೆ. ಹಲವು ರೀತಿಯಲ್ಲಿ ಅವರು ನಿರಾಕರಣೆಗೆ ಒಳಗಾದರೂ ಸಹ ಈ ಭೂಮಿ, ನೀರಿಗೆ ಭೇದ&ಭಾವವಿಲ್ಲ. ಇವೆರಡೂ ಎಲ್ಲರಿಗೂ ಸಮಾನವಾಗಿ ದಕ್ಕುತ್ತವೆ ಎಂದು ಪ್ರತಿಪಾದಿಸಿದ್ದರು ಎಂದರು.

ಕಾಲೇಜ್​ನ ಪ್ರಾಂಶುಪಾಲ ಡಾ. ಎಸ್​. ಭಾಸ್ಕರ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಸಲಹಾ ಸಮಿತಿ ಸದಸ್ಯ ಡಾ. ಅರುಣಕುಮಾರ್​ ಎಸ್​.ಆರ್​. ಉಪಸ್ಥಿತರಿದ್ದರು.

ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ ಶೆಟ್ಟಿ ವಂದಿಸಿದರು. ಡಾ. ಪಲ್ಲವಿ ಎನ್​. ಕಾರ್ಯಕ್ರಮ ನಿರೂಪಿಸಿದರು.

ಕನಕದಾಸರು ತಿಮ್ಮಪ್ಪ ದಂಡನಾಯಕರಾಗಿದ್ದ ಕಾಲದಲ್ಲಿ ಕಟ್ಟಿಸಿದ ಕೆರೆಗಳು, ಜಲಮೂಲಗಳ ಸಂರಕ್ಷಣೆಗೆ ತೋರಿದ ಉತ್ಸಾಹದಿಂದ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕೃಷಿ ಸಂಪತ್ತು ಅರಳಿದವು. ಅವರ ರಾಮಧಾನ್ಯ ಚರಿತೆಯಲ್ಲಿ ನೆಲ-ಜಲ ಸಂಸ್ಕೃತಿಯ ಚಿಂತನೆಯನ್ನು ಅಪಾರವಾಗಿ ಕಾಣಬಹುದಾಗಿದೆ.
ಡಾ.ಕೃಷ್ಣರಾಜ ಕರಬ. ಕುಂದಾಪುರ ವಕ್ವಾಡಿಯ ಗುರುಕುಲ ಪ.ಪೂ. ಕಾಲೇಜ್​ನ ಉಪನ್ಯಾಸಕ.