ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜ್​ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಾವಗೀತೆ ಮತ್ತು ಇಂಗ್ಲಿಷ್​ ಚರ್ಚಾ ಸ್ಪರ್ಧೆಯನ್ನು ಸತೀಶ ನಾಯಕ ಉದ್ಘಾಟಿಸಿದರು. ಜಗದೀಶಕುಮಾರ, ಗಂಗಾಧರ ವಿ.ಎ., ಇಂದಿರಾ, ಭವ್ಯಾ ನಾಗರಾಜ, ಮಲ್ಲಿಕಾ, ಗ್ರೀಷ್ಮಾ ಇದ್ದರು. 
ಉಡುಪಿ

ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ

* ಉಡುಪಿ ಡಿಡಿಪಿಯು ಸತೀಶ ನಾಯಕ ಅಭಿಪ್ರಾಯ

* ಪ.ಪೂ. ಕಾಲೇಜ್​ಗಳ ಭಾವಗೀತೆ, ಚರ್ಚಾ ಸ್ಪರ್ಧೆ ಉದ್ಘಾಟನೆ

ಉಡುಪಿ: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಷ್ಟೇ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಇನ್ನಿತರ ಸಹಪಠ್ಯಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸೋಲಿನಿಂದ ಪಾಠ ಕಲಿತು, ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪ.ಪೂ.) ಉಡುಪಿ ಜಿಲ್ಲಾ ಉಪನಿರ್ದೇಶಕ ಸತೀಶ ನಾಯಕ ಅಭಿಪ್ರಾಯಪಟ್ಟರು.

ಉಡುಪಿ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಶುಕ್ರವಾರ (ನ.13) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜ್​ಗಳ ಭಾವಗೀತೆ ಮತ್ತು ಇಂಗ್ಲಿಷ್​ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಉತ್ತಮರಾಗಿ ಬದುಕಿ

ಜೀವನದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಗೆಲುವು ಸಾಧಿಸಿದಾಗ ಸಂತೋಷವಾಗುವಂತೆ ಸೋಲನ್ನೂ ಸಹ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ, ಅದನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಹಿರಿಯ ಉಪನ್ಯಾಸಕಿ ಡಾ. ಉಷಾ, ಆಂಗ್ಲ ಭಾಷಾ ಉಪನ್ಯಾಸಕರಾದ ಗಂಗಾಧರ ವಿ.ಎ., ಶುಭಗೀತಾ, ಸ್ವಾತಿ, ಕಾಲೇಜ್​ನ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷೆ ಮಲ್ಲಿಕಾ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ, ವಿದ್ಯಾರ್ಥಿ ನಾಯಕಿ ಗ್ರೀಷ್ಮಾ, ಎನ್​ಎಸ್​ಎಸ್​ ನಾಯಕಿ ವಿಜೇತಾ ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸಮೀಕ್ಷಾ ಮತ್ತು ಪ್ರಿಯಾಂಕಾ ಪ್ರಾರ್ಥಿಸಿದರು. ಪ್ರಾಂಶುಪಾಲ ಜಗದೀಶಕುಮಾರ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಭವ್ಯಾ ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸುಧಾ ಹೆಗಡೆ ವಂದಿಸಿದರು. ಜಿಲ್ಲೆಯ ವಿವಿಧ ಪ.ಪೂ. ಕಾಲೇಜ್​ಗಳ ಸ್ಪರ್ಧಿಗಳು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.

ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಫಲಿತಾಂಶವಲ್ಲ. ಪ್ರತಿ ಸ್ಪರ್ಧೆಯೂ ಹೊಸ ಅನುಭವ ಹಾಗೂ ಕಲಿಕೆಗೆ ಅವಕಾಶ ಒದಗಿಸುತ್ತದೆ. ಸಹಪಠ್ಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸಮಯಪ್ರಜ್ಞೆ, ಶಿಸ್ತು ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಯುತ್ತದೆ.
ಜಗದೀಶಕುಮಾರ. ಕಾಲೇಜ್​ನ ಪ್ರಾಂಶುಪಾಲ.