ಶಂಕರಸದನ, ಅಮೆಕ್ಕಳ, ಪಳ್ಳಕ್ಕಾನ ಸಂಪರ್ಕ ರಸ್ತೆ ಪೆರ್ಲ ಅಂಚೆ ಕಚೇರಿ ಸಮೀಪ ಅಗಲ ಕಿರಿದಾಗಿ ಸಂಚಾರಕ್ಕೆ ಸಮಸ್ಯೆಯಾಗಿರುವುದು. 
ಉಡುಪಿ

ಅಗಲ ಕಿರಿದಾದ ಪೆರ್ಲ ಶಂಕರಸದನ ರಸ್ತೆ

ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಶಂಕರಸದನ, ಕೇದಾರ ಮೂಲಕ ಪಳ್ಳಕ್ಕಾನ, ಬಜಕೂಡ್ಲು ಕಡೆಗೆ ಸಂಚರಿಸುವ ರಸ್ತೆ ಪೆರ್ಲ ಅಂಚೆ ಕಚೇರಿ ಸಮೀಪ ತೀರಾ ಇಕ್ಕಟ್ಟಿನಿಂದ ಕೂಡಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೆರ್ಲ ಪೇಟೆಯಿಂದ ಅಂಚೆ ಕಚೇರಿ ಮೂಲಕ ಸಾಗುವ ಈ ರಸ್ತೆ ಅಗಲ ಕಿರಿದಾಗಿರುವುದಲ್ಲದೆ, ಒಂದು ಪಾರ್ಶ್ವ ಹೊಂಡದಿಂದ ಕೂಡಿದ್ದು ಅಪಾಯಕಾರಿಯಾಗಿದೆ. ರಸ್ತೆ ಒಂದು ಪಾರ್ಶ್ವದಲ್ಲಿ ಅಂಚೆ ಕಚೇರಿ ಕಟ್ಟಡವಿದ್ದರೆ, ಇನ್ನೊಂದು ಬದಿಯಲ್ಲಿ ಅಂಗಡಿಗಳು ಕಾರ್ಯಾಚರಿಸುತ್ತಿವೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆಯನ್ನು ವಿಸ್ತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನೇಕ ಸ್ಥಳಗಳಿಗೆ ಪ್ರಮುಖ ಸಂಪರ್ಕ ರಸ್ತೆ: ಪೆರ್ಲ ಶ್ರೀ ಶಂಕರಸದನ, ಭಾರತೀ ಸದನ, ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ, ಕೇದಾರ ಸೇರಿದಂತೆ ವಿವಿಧ ಕೇಂದ್ರಗಳಿಗೆ ತೆರಳಲು ಇದೇ ಹಾದಿ ಬಳಸಬೇಕಾಗಿದೆ.
ಇಲ್ಲಿರುವ ಎರಡು ಸಮುದಾಯ ಭವನಗಳಲ್ಲಿ ವಿವಾಹ ಮತ್ತಿತರ ಸಮಾರಂಭಗಳು ನಡೆಯುವುದರಿಂದ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇನ್ನು ಸಾರ್ವಜನಿಕ ಹಿಂದೂ ರುದ್ರಭೂಮಿಗೂ ಇಲ್ಲಿಂದಲೇ ಸಂಚರಿಸಬೇಕು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳ, ಅಮೆಕ್ಕಳ, ಪಳ್ಳಕ್ಕಾನ ಪ್ರದೇಶಕ್ಕೆ ತೆರಳಲೂ ಇದೇ ರಸ್ತೆ ಬಳಸಬೇಕಾಗುತ್ತಿದೆ.
ಅಂಚೆ ಕಚೇರಿಯಲ್ಲಿನ ಏರು ರಸ್ತೆಯಲ್ಲಿ ಸಾಗುವಾಗ ಸ್ವಲ್ಪ ಎಚ್ಚರ ತಪ್ಪಿದರೂ, ವಾಹನ ಹೊಂಡದಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಏಕಕಾಲಕ್ಕೆ ವಿರುದ್ಧ ದಿಕ್ಕಿನಿಂದ ಆಗಮಿಸುವ ಎರಡು ವಾಹನಗಳಿಗೆ ಸಂಚರಿಸಲಾಗದ ಸ್ಥಿತಿಯಿಲ್ಲಿದೆ. ಮುಖ್ಯ ರಸ್ತೆಯಿಂದ 50 ಮೀ.ವರೆಗೆ ಇಲ್ಲಿನ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆ ಅಗಲಗೊಳಿಸಿ ಅಭಿವೃದ್ಧಿಪಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಅಂಚೆ ಕಚೇರಿ ಪಕ್ಕದಲ್ಲೇ ಹಾದುಹೋಗುವ ರಸ್ತೆ ಒಂದು ಪಾರ್ಶ್ವದಲ್ಲಿ ಹೊಂಡದಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಎಣ್ಮಕಜೆ ಗ್ರಾಪಂ ಹಾಗೂ ಶಾಸಕರಿಗೆ ಈಗಾಗಲೇ ಮನವಿ ನೀಡಲಾಗಿದೆ.

— ಪಿ.ಶಂಕರನಾರಾಯಣ ಭಟ್, ಅಧ್ಯಕ್ಷ, ಶ್ರೀ ಶಂಕರಸದನ ಸೇವಾ ಸಮಿತಿ, ಪೆರ್ಲ