ಉಡುಪಿ ಮಣಿಪಾಲದಲ್ಲಿ ಕರಾವಳಿ ಕಾವಲು ಪೊಲೀಸ್​ ಘಟಕದ ಅಧಿಕಾರಿ, ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು. ಹರಿರಾಮ್​ ಶಂಕರ್​, ಡಾ. ಎಚ್​.ಎಸ್​. ಬಲ್ಲಾಳ್​, ಡಾ.ಆನಂದ್​ ವೇಣುಗೋಪಾಲ್​, ಡಾ.ಅನಿಲ್​ ಕೆ. ಭಟ್​, ಡಾ.ಪ್ರಾಸ್ಟ್ಯನ್​ ಮರೆ ಶಿರೂರು, ಶ್ವೇತಾ ಕುಲಾಲ್​ ಇದ್ದರು. 
ಉಡುಪಿ

ತರಬೇತಿಯಿಂದ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಳ

ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್​ ಶಂಕರ್​ ಅಭಿಪ್ರಾಯ

ಕರಾವಳಿ ಕಾವಲು ಪೊಲೀಸ್​ ಸಿಬ್ಬಂದಿಗೆ ಜಲರಕ್ಷಣೆ ಕೋರ್ಸ್​

ಉಡುಪಿ: ಸಮುದ್ರ ತೀರದಲ್ಲಿ ಮತ್ತು ಸಮುದ್ರದಲ್ಲಿ ಕರ್ತವ್ಯ ನಿರ್ವಹಿಸುವ ಕರಾವಳಿ ಕಾವಲು ಪೊಲೀಸ್​ ಘಟಕದ ಅಧಿಕಾರಿ, ಸಿಬ್ಬಂದಿಗೆ ನೀಡಿರುವ ತರಬೇತಿ ಅತ್ಯಂತ ಉಪಯುಕ್ತವಾಗಿದೆ. ಇದು ಕರ್ತವ್ಯ ನಿರ್ವಹಣೆಯಲ್ಲಿ ಇನ್ನಷ್ಟು ಕಾರ್ಯ ಕ್ಷಮತೆ ಲಭಿಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಮಣಿಪಾಲ ಮಾಹೆ ಸಹಕಾರ ಪ್ರಶಂಸನೀಯ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಹೇಳಿದರು.

ಮಣಿಪಾಲದ ಮರೇನಾ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನ ಸಭಾಂಗಣದಲ್ಲಿ ಮಾಹೆ ವತಿಯಿಂದ ವರ್ಲ್ಡ್​ ಮೆರಿಟೈಮ್​ ಡೇ-2026ರ ನಿಮಿತ್ತ ಕರಾವಳಿ ಕಾವಲು ಪೊಲೀಸ್​ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗೆ ಗುರುವಾರ (ಸೆ.24) ಆಯೋಜಿಸಿದ್ದ ಜಲರಕ್ಷಣೆ ಮತ್ತು ಪುನರುಜ್ಜೀವನ ಪ್ರಮಾಣಪತ್ರ ಕೋರ್ಸ್​ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಲಾಖೆಗೆ ಸದಾ ಸಹಕಾರ

ಮಾಹೆಯ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಮಾತನಾಡಿ, ಈ ತರಬೇತಿಯು ಜನರ ಜೀವರಕ್ಷಣೆ ಮಾಡಲು ಪೊಲೀಸ್​ ಇಲಾಖೆಗೆ ಅತ್ಯಂತ ಉಪಯುಕ್ತವಾಗಿದೆ. ಪೊಲೀಸ್​ ಇಲಾಖೆ ಮತ್ತು ಮಣಿಪಾಲ ಮಾಹೆ ಸಂಸ್ಥೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಮುಂದೆಯೂ ಸಹ ಇಲಾಖೆಯ ಚಟುವಟಿಕೆಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದರು.

ಮಾಹೆಯ ಚೀಪ್​ ಅಪರೇಟಿಂಗ್​ ಆಫೀಸರ್​ ಡಾ.ಆನಂದ್​ ವೇಣುಗೋಪಾಲ್​, ಕೆಎಂಸಿ ಡೀನ್​ ಡಾ.ಅನಿಲ್​ ಕೆ. ಭಟ್​, ಡಿರ್ಪಾಟ್​ಮೆಂಟ್​ ಅಫ್​ ಎರ್ಮಜೆನ್ಸಿ ಮೆಡಿಸಿನ್​ನ ಅಸೋಸಿಯೇಟ್​ ಪ್ರೊಫೆಸರ್​ ಹಾಗೂ ಸಿಡಬ್ಲ್ಯುಎಂ ಕೋ-ಆರ್ಡಿನೇಟರ್​ ಡಾ.ಪ್ರಾಸ್ಟ್ಯನ್​ ಮರೆ ಶಿರೂರು ಉಪಸ್ಥಿತರಿದ್ದರು.

ತರಬೇತಿ ಪಡೆದ 42 ಸಿಬ್ಬಂದಿಗೆ ಮಣಿಪಾಲ ಮಾಹೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು. ಉಪನ್ಯಾಸಕಿ ಶ್ವೇತಾ ಕುಲಾಲ್​ ತರಬೇತಿ ನೀಡಿದ್ದು, ಕಾರ್ಯಕ್ರಮ ನಿರ್ವಹಿಸಿದರು.