ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ನಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಯಕ್ಷರಂಗ ವಿಭಾಗದ ಕಲಾವಿದರು ಪ್ರಾತ್ಯಕ್ಷಿಕೆ ನೀಡಿದರು.
* ಯಕ್ಷಗುರು ಉಮೇಶ್ ಸುವರ್ಣ ಮಾಹಿತಿ
* ಪಿಪಿಸಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ
ಉಡುಪಿ: ಯಕ್ಷಗಾನವು ಶ್ರೇಷ್ಠ ಹಾಗೂ ಸರ್ವಸುಂದರಾಂಗ ಕಲೆಯಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿದ್ದರೂ ಯಕ್ಷಗಾನದಲ್ಲಿ ಪೂರ್ವರಂಗ ಬಹಳ ಮುಖ್ಯವಾದ ಭಾಗ. ಆದರೆ, ಈಗಿನ ಯಕ್ಷಗಾನ ಪ್ರದರ್ಶನದಲ್ಲಿ ಪೂರ್ವರಂಗ ಮಾಯವಾಗಿದೆ. ಹೀಗಾಗಿ ಈ ಕಲೆಯನ್ನು ಕಲಿಯುವವರಿಗೆ ಪೂರ್ವರಂಗದ ಮಾಹಿತಿ ಒದಗಿಸಲು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದು ಹಿರಿಯ ಭಾಗವತ ಹಾಗೂ ಯಕ್ಷಗುರು ಉಮೇಶ್ ಸುವರ್ಣ ತಿಳಿಸಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ (ಸ್ವಾಯತ್ತ)ನಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಯಕ್ಷರಂಗ ವಿಭಾಗದ ಕಲಾವಿದರು ಹಾಗೂ ಕಾಲೇಜ್ನ ವಿದ್ಯಾರ್ಥಿ ವೇದಿಕೆ ಹಾಗೂ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ, ಆರ್ಆರ್ಸಿ ಉಡುಪಿಯ ಸಹ ಸಂಶೋಧಕ ಡಾ. ಅರುಣಕುಮಾರ್ ಎಸ್.ಆರ್., ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕರಬ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇದಿಕೆ ಹಾಗೂ ಪ್ರಾತ್ಯಕ್ಷಿಕೆಯ ಸಂಯೋಜಕ ಡಾ. ಶಿವಕುಮಾರ ಅಳಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಯಕ್ಷನಡಿಗೆ ಶಾಲೆಯೆಡೆಗೆ
ಯಕ್ಷಗಾನ ಕೇಂದ್ರದ ಗುರುಗಳು, ಕಲಾವಿದರು ಒಗ್ಗೂಡಿ 'ಯಕ್ಷನಡಿಗೆ ಶಾಲೆಯೆಡೆಗೆ' ಶೀರ್ಷಿಕೆಯಡಿ ಯಕ್ಷಗಾನದ ಗಣಪತಿಸ್ತುತಿ, ಕೋಡಂಗಿ, ಬಾಲಗೋಪಾಲ, ರಾಜವೇಷದ ಒಡ್ಡೋಲಗ, ಪ್ರಯಾಣ ಕುಣಿತ, ಯುದ್ಧ ನೃತ್ಯ, ಗಂಡು ಬಣ್ಣದ ವೇಷದ ಒಡ್ಡೋಲಗ ಮೊದಲಾದ ವಿಭಾಗಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕೇಂದ್ರದ ಭಾಗವತ ದೇವರಾಜ್ ದಾಸ್ ಮರವಂತೆ, ಚಂಡೆಯಲ್ಲಿ ಬಸವ ಮುಂಡಾಡಿ, ಮದ್ದಳೆಯಲ್ಲಿ ನಾಗರಾಜ್ ಎಡಮೊಗೆ ಸಹಕರಿಸಿದರು.