ಉಡುಪಿಯಲ್ಲಿ ಆಯೋಜಿಸಿದ್ದ ಕಾಪು ಕ್ಷೇತ್ರದ ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆಯನ್ನು ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಗುರುರಾಜ್, ಕೇಶವ್ ಕೋಟ್ಯಾನ್, ಸಂದೀಪ್, ಚೇತನಾ, ಪ್ರಸಾದ್ ಮಲ್ಯ ಇದ್ದರು.
ಉಡುಪಿಯಲ್ಲಿ ಜನಸಂಪರ್ಕ ಸಭೆ
ಉಡುಪಿ: ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿಗಳು ಧನಾತ್ಮಕವಾಗಿ ಚಿಂತಿಸಬೇಕಲ್ಲದೆ, ಆತ್ಮ ಒಪ್ಪುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಜಗತ್ತು ಒಪ್ಪುವ ರೀತಿಯಲ್ಲಲ್ಲ, ಜಗದೀಶ (ದೇವರು) ಮೆಚ್ಚುವಂತೆ ಕೆಲಸ ಮಾಡಬೇಕು. ಶಾಸಕನಾಗಿ ನಾನೂ ಸೇರಿದಂತೆ ತಾವೆಲ್ಲರೂ ಸಹ ಪರೋಪಕಾರದ ಗುಣ ಹೊಂದಿರಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ ನೀಡಿದರು.
ಉಡುಪಿಯ ಬನ್ನಂಜೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಉಡುಪಿ ತಾಲೂಕಿನ 10 ಗ್ರಾಪಂ ವ್ಯಾಪ್ತಿಯ 18 ಗ್ರಾಮಗಳಿಗೆ ಸಂಬಂಧಿಸಿ ಮಂಗಳವಾರ (ನ.18) ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ನಿವೇಶನ ಕೊಡಿಸಲು ಯತ್ನ
ಕ್ಷೇತ್ರದ ಜನರು ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ. ಉಡುಪಿಯಿಂದ ಸುಮಾರು 10 ಕಿಮೀ ದೂರದಲ್ಲಿರುವ ಜನರಿಗೆ ಕಚೇರಿ ಅಲೆದಾಟ ಸಾಧ್ಯವಿಲ್ಲ. ಹೀಗಾಗಿ ಉಡುಪಿಯಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಿದ್ದೇನೆ. ತಮಗಿರುವ ಎಲ್ಲ ಸಮಸ್ಯೆ ಹೇಳಿಕೊಂಡು, ಇಲ್ಲಿಯೇ ನಿವಾರಿಸಿಕೊಳ್ಳಬೇಕು. ನನ್ನ ಕಾಪು ಕ್ಷೇತ್ರದಲ್ಲಿ ಸುಮಾರು 9,800 ಜನರು ನಿವೇಶನ ರಹಿತರಿದ್ದಾರೆ. ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಜನರಿಗೆ ನಿವೇಶನ ಒದಗಿಸಲು ಪ್ರಯತ್ನಿಸುತ್ತೇನೆ. ಸುಂದರ, ಸಮೃದ್ಧ ಹಾಗೂ ಸಾಮರಸ್ಯದ ಕಾಪು ನಿರ್ಮಿಸಲು ಎಲ್ಲರ ಸಹಕಾರವಿರಲಿ ಎಂದರು.
ಸಭೆಯಲ್ಲಿ 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ್ ಕೋಟ್ಯಾನ್, ಕೋಡಿಬೆಟ್ಟು ಗ್ರಾಪಂ ಅಧ್ಯಕ್ಷ ಸಂದೀಪ್, ಪೆರ್ಡೂರು ಗ್ರಾಪಂ ಅಧ್ಯೆ ಚೇತನಾ, ಪೆರಂಪಳ್ಳಿ ಗ್ರಾಪಂ ಅಧ್ಯಕ್ಷ ಪ್ರಸಾದ್ ಮಲ್ಯ ಉಪಸ್ಥಿತರಿದ್ದರು.
ಉಡುಪಿ ತಾಲೂಕು ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 70ಕ್ಕೂ ಅಧಿಕ ಅಹವಾಲು ಸ್ವೀಕೃತವಾಗಿದ್ದು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಯಿತು. ಇನ್ನೂ ಕೆಲವು ಅರ್ಜಿಗಳನ್ನು ಸ್ವೀಕರಿಸಿ, ನಿಗದಿತ ಸಮಯದೊಳಗೆ ಕೆಲಸ ಮಾಡಿಕೊಡುವುದಾಗಿ ಅಧಿಕಾರಿಗಳು ಗ್ರಾಮೀಣ ಜನರಿಗೆ ತಿಳಿಸಿದರು.
ಪ್ರಜ್ಞಾ ಪ್ರಾರ್ಥಿಸಿದರು. ಉಡುಪಿ ತಹಸೀಲ್ದಾರ್ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತಾಲೂಕು ಕಚೇರಿ ಸಿಬ್ಬಂದಿ ಕೆ.ಸುಧಾಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದ್ಯಾವರದ ಗ್ರಾಮ ಆಡಳಿತಾಧಿಕಾರಿ ವಿಜಯ್ ಸಹಕರಿಸಿದರು.