ಉಡುಪಿಯಲ್ಲಿ ನಗರ ಆರೋಗ್ಯ ಕೇಂದ್ರ-1ರ ಕಾಂಪೌಂಡ್ ಕೆಡವಿ ಖಾಸಗಿ ಸೇವಾಸಿಂಧು ಕಾಮನ್ ಸರ್ವೀಸ್ ಸೆಂಟರ್ ನಿರ್ಮಿಸುತ್ತಿರುವುದು.
* ಕಾಂಪೌಂಡ್ ಕೆಡವಿ ಘಟಕ ನಿರ್ಮಾಣ ಕಾಮಗಾರಿ
* ಅವೈಜ್ಞಾನಿಕ ಕಾಮಗಾರಿಗೆ ಜನರ ಅಸಮಾಧಾನ
ಉಡುಪಿ: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ&1ರಲ್ಲಿ ನಗರಸಭೆಯ ತೆರಿಗೆ ಪಾವತಿ ಕೇಂದ್ರ ತೆರೆಯಲಾಗುತ್ತಿದೆ. ಆಸ್ಪತ್ರೆಯ ಕಾಂಪೌಂಡ್ ಕೆಡವಿ ಒಳಾಂಗಣದಲ್ಲಿ ತೆರಿಗೆ ಪಾವತಿ ಘಟಕ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ.
ಇದು ತೆರಿಗೆ ಪಾವತಿಸುವವರಿಗೆ ಅನುಕೂಲವಾದರೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಡಕಾಗುವ ಸಾಧ್ಯತೆ ಇದೆ. ಸಣ್ಣ ಸಮಸ್ಯೆ ನಿವಾರಿಸಲು ಇನ್ನೊಂದು ಸಮಸ್ಯೆ ಸೃಷ್ಟಿಸುವ ಈ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಾದಚಾರಿಗಳಿಗೆ ತೊಂದರೆ
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹಾಗೂ ಚಿಕಿತ್ಸಕರಿಗೂ ಇಲ್ಲಿ ನಿರ್ಮಾಣಗೊಳ್ಳಲಿರುವ ತೆರಿಗೆ ಪಾವತಿ ಕೇಂದ್ರದಿಂದ ಸಮಸ್ಯೆ ಆಗಲಿದೆ. ಈ ಸ್ಥಳದಲ್ಲಿ ತೆರಿಗೆ ಪಾವತಿ ಮಾಡಲು ಜನರ ಗುಂಪು ಸೇರಲಿದೆ. ಪಾವತಿ ವ್ಯವಹಾರ ಮಾತುಕತೆಗಳ ಗದ್ದಲ, ಕಿರಿಕಿರಿ ಆಗಲಿದೆ. ತೆರಿಗೆ ಪಾವತಿ ಕೇಂದ್ರದ ಮುಂದೆಯೇ ಫುಟ್ಪಾತ್ ಇದ್ದು, ಪಾದಚಾರಿಗಳಿಗೂ ಇಲ್ಲಿ ನಡೆದುಹೋಗಲು ತೊಂದರೆಯಾಗಲಿದೆ. ತೆರಿಗೆ ಪಾವತಿ ಮಾಡಲು ಬರುವವರು ಇಲ್ಲಿಯೇ ವಾಹನ ನಿಲ್ಲಿಸುವುದರಿಂದ ರಸ್ತೆಯಲ್ಲಿ ಅಪಘಾತವೂ ಸಂಭವಿಸುವ ಸಾಧ್ಯತೆಯಿದೆ.
ಸರ್ಕಾರಿ ಆರೋಗ್ಯ ಕೇಂದ್ರದ ಜಾಗದಲ್ಲಿ ನಗರಸಭೆಗೆ ತೆರಿಗೆ ಪಾವತಿ ಮಾಡಲು ಖಾಸಗಿ ಸರ್ವೀಸ್ ಸೆಂಟರ್ ಸ್ಥಾಪಿಸಿರುವುದು ಅತ್ಯಂತ ಅವೈಜ್ಞಾನಿಕ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆ ಕೂಡಲೇ ಈ ತೆರಿಗೆ ಕೇಂದ್ರ ಸ್ಥಗಿತಗೊಳಿಸಬೇಕು. ನಗರಸಭೆಯ ಆಡಳಿತ ಕಚೇರಿಯ ಕಟ್ಟಡದಲ್ಲಿಯೇ ತೆರಿಗೆ ಪಾವತಿ ಕೇಂದ್ರ ನಿರ್ಮಿಸಬೇಕು.
ಪಿಎಚ್ಸಿಯ ಕಾಂಪೌಂಡ್ನಲ್ಲಿ ನಗರಸಭೆಯ ತೆರಿಗೆ ಪಾವತಿ ಕೇಂದ್ರ ತೆರೆಯುತ್ತಿರುವ ಕುರಿತು ನಗರಸಭೆಯ ಆಯುಕ್ತ ಮಹಾಂತೇಶ್ ಹಂಗರಗಿ ಅವರಲ್ಲಿ ವಿಚಾರಿಸಿದಾಗ, ಇತ್ತೀಚೆಗೆ ಸಾರ್ವಜನಿಕರು ಪಾವತಿ ಮಾಡಿದ್ದ ಮನೆ ತೆರಿಗೆಯ ಹಣ ಇಲ್ಲಿನ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಯಿಂದ ದುರುಪಯೋಗ ಆದ ಹಿನ್ನೆಲೆಯಲ್ಲಿ ಕಾಮನ್ ಸರ್ವೀಸ್ ಸೆಂಟರ್ ತೆರೆಯಲಾಗುತ್ತಿದೆ. ಈ ವಿಚಾರವಾಗಿ ಡಿಎಚ್ಒ ಜತೆ ಮಾತನಾಡುವುದಾಗಿ ತಿಳಿಸಿದರು. ಡಿಎಚ್ಒ ಅವರ ಬಳಿ ವಿಚಾರಿಸಿದಾಗ, ಜನರಿಗೆ ಬೇಡವಾದರೆ ಸ್ಥಗಿತ ಮಾಡುತ್ತೇವೆ ಎಂದು ಉತ್ತರಿಸಿದರು. ಸರ್ಕಾರಿ ಜಾಗದಲ್ಲಿ ಖಾಸಗಿಯವರಿಗೆ ಕಾಮನ್ ಸರ್ವೀಸ್ ಸೆಂಟರ್ ತೆರೆಯಲು ಅವಕಾಶ ನೀಡುವ ಬದಲು ಕರ್ನಾಟಕ ಒನ್ ಸೇವಾ ಕೇಂದ್ರ ತೆರೆಯಬಹುದಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿರುವ ನಗರ ಆರೋಗ್ಯ ಕೇಂದ್ರದ ಆವರಣದಲ್ಲಿ ಸೇವಾಸಿಂಧು ಕಾಮನ್ ಸರ್ವೀಸ್ ಸೆಂಟರ್ ತೆರೆಯಲು ಮಾ.21ರಂದು ಉಡುಪಿಯ ಗೋವರ್ಧನ್ ಆರ್. ನಾಯಕ್ (ನಾಯಕ್ ಗ್ರೂಪ್ಸ್) ಎಂಬವರಿಗೆ ಸ್ಥಳಾವಕಾಶ ನೀಡಿ ಆದೇಶ ಹೊರಡಿಸಲಾಗಿತ್ತು. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯಲಾಗಿದೆ. ಕೆಡವಿದ ಕಾಂಪೌಂಡ್ಅನ್ನು ಮೊದಲಿನಂತೆ ಮರುನಿರ್ಮಿಸಲೂ ಸಹ ಅವರಿಗೆ ಸೂಚಿಸಲಾಗಿದೆ.