ನೂರಾರು ಜನ ಅಗ್ರಿಗೋಲ್ಡ್​ ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಜಮಾಯಿಸಿದ್ದರು. 
ಉಡುಪಿ

ಅಗ್ರಿಗೋಲ್ಡ್​ ಬಾಂಡ್​ ನೀಡಲು ಎಸ್‌ಪಿ ಕಚೇರಿಗೆ ಜನರ ದೌಡು

ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್​ ಸಂಸ್ಥೆಯ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವಾಪಸ್​ ಪಡೆಯುವ ನಿಟ್ಟಿನಲ್ಲಿ ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಜಮಾಯಿಸಿದ್ದರು.

ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಎಸ್ಪಿ ಕಚೇರಿಯಲ್ಲಿ ನಡೆಯಲಿದೆ. ದಿನಕ್ಕೆ 150 ಮಂದಿಯ ದಾಖಲೆ ಸಂಗ್ರಹಿಸಲು ಟೋಕನ್​ ನೀಡುವ ವ್ಯವಸ್ಥೆ ಮಾಡಲಾಗಿದೆ.

ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು ಆಗಮಿಸಿದ್ದರಿಂದ ಟೋಕನ್​ ಪಡೆಯಲು ಗೊಂದಲದ ವಾತಾವರಣ ನಿಮಾರ್ಣವಾಯಿತು. ನಮಗೂ ಟೋಕನ್​ ನೀಡಿ ಎಂದು ಮಹಿಳೆಯರು ಪೊಲೀಸ್​ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸಂತ್ರಸ್ತರನ್ನು ಸಮಾಧಾನವಡಿಸಿ, ದಾಖಲೆ ಸಂಗ್ರಹ ಪ್ರಕ್ರಿಯೆಯ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದರು.

ಪೊಲೀಸ್​ ಇಲಾಖೆ ಸೂಚನೆ

ಅಗ್ರಿಗೋಲ್ಡ್​ ಕಂಪನಿಯ ಬಾಂಡ್​ಗಳ ಪರಿಶೀಲನೆಗಾಗಿ ಆಂಧ್ರಪ್ರದೇಶದ ತನಿಖಾ ಸಂಸ್ಥೆಯ ಅಧಿಕಾರಿಗಳು ಉಡುಪಿಗೆ ಆಗಮಿಸಿದ್ದು, ಸಂಸ್ಥೆಯ ಬಾಂಡ್​ ಹೊಂದಿರುವ ಗ್ರಾಹಕರು ತಮ್ಮ ಮೂಲ ಬಾಂಡ್​ಗಳನ್ನು ತೆಗೆದುಕೊಂಡು ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್​ ಕಚೇರಿಗೆ ಹಾಜರಾಗಿ ಉನ್ನತ ಪೊಲೀಸ್​ ಅಧಿಕಾರಿಗಳ ಮುಂದೆ ಪರಿಶೀಲನೆಗಾಗಿ ಸಲ್ಲಿಸಬೇಕು.

ಅ. 29ರಂದು ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮಗಳ ಅಗ್ರಿಗೋಲ್ಡ್​ ಬಾಂಡ್​ ಹೊಂದಿರುವ ಗ್ರಾಹಕರು ಬರಬೇಕು. 30ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ಹಾಗೂ 31ರಂದು ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂರು ದಿನದಂದು ಹೆಬ್ರಿ ತಾಲೂಕಿನವರಿಗೆ ಮಾತ್ರ ಬರಲು ಅವಕಾಶ ನೀಡಲಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಟೋಕನ್​ ವಿತರಣೆ ಪ್ರಾರಂಭವಾಗುತ್ತದೆ. ಪ್ರಥಮವಾಗಿ ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್​ ನೀಡಲಾಗುತ್ತದೆ. ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತ@ ಹಾಜರಾಗಲು ಸಾಧ್ಯವಾಗದ ಗ್ರಾಹಕರ ಪರವಾಗಿ ಅವರ ಏಜೆಂಟ್​ಗಳು, ಸಂಬಂಧಿಕರು ಬಾಂಡ್​ಗಳನ್ನು ತಂದು ಸಲ್ಲಿಸಬೇಕು. ಅಶಕ್ತರು, ಗರ್ಭಿಣಿಯರು ಹಾಗೂ ವೈದ್ಯಕಿಯ ಸಮಸ್ಯೆ ಹೊಂದಿರುವ ಗ್ರಾಹಕರು ಸಂಬಂಧಿತ ವೈದ್ಯಕಿಯ ಪ್ರಮಾಣಪತ್ರಗಳನ್ನು ಸಂಬಂಧಿಕರು ಕಡ್ಡಾಯವಾಗಿ ತಂದು ಹಾಜರುಪಡಿಸಬೇಕು. ಹೆಚ್ಚಿನ ಮಾಹಿತಿಗೆ 08202526444 ಅಥವಾ 9480805400 ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.