ತ್ರಾಸಿಯ ನ್ಯಾಯಬೆಲೆ ಅಂಗಡಿ ಎದುರು ಸೇರಿರುವ ಪಡಿತರ ಫಲಾನುಭವಿಗಳು. 
ಉಡುಪಿ

ಪಡಿತರಕ್ಕೆ ಕಾದು ಸುಸ್ತಾದ ಜನತೆ!

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ನಾಗರಿಕರು ತೊಂದರೆ ಅನುಭವಿಸುತ್ತಿದ್ದು, ಗಂಟೆಗಟ್ಟಲೆ ಕಾದರೂ ಪಡಿತರ ದೊರೆಯದೆ ವಾಪಸಾಗುತ್ತಿದ್ದಾರೆ. ಪಡಿತರಕ್ಕಾಗಿ ಪಡಿತರ ವಿತರಣಾ ಕೇಂದ್ರದ ಸಮೀಪ ಕಾದು ನಿಂತು ಸುಸ್ತಾಗಿರುವ ಜನರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15-20 ದಿನಗಳಿಂದ ರಾಜ್ಯವ್ಯಾಪಿ ಸರ್ವರ್ ಸಮಸ್ಯೆಯಿದ್ದು, ಕುಂದಾಪುರ, ಬೈಂದೂರು ಮಾತ್ರವಲ್ಲದೆ, ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪಡಿತರ ಪಡೆಯಲು ಜನರು ತೊಂದರೆ ಅನುಭವಿಸುವಂತಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆಯಿಂದ ಸಾಲುಗಟ್ಟಿ ನಿಂತರೂ ಪಡಿತರ ಪಡೆಯಲು ಆಗುತ್ತಿಲ್ಲ. ಬಿಪಿಎಲ್ ಪಡಿತರ ಕಾರ್ಡ್‌ದಾರರು ಹೆಬ್ಬೆಟ್ಟು(ಥಂಬ್) ಕೊಡಲು ಹೋದಾಗ ಸರ್ವರ್ ಸಮಸ್ಯೆಯಾಗುತ್ತಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಕಾದು ನಿಂತರೂ ಅಕ್ಕಿ ಸಿಗದೆ ಜನರು ನಿರಾಶೆಯಿಂದ ಮನೆಗೆ ಮರಳುವಂತಾಗಿದೆ. ಮೇ 31ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಈ ತಿಂಗಳ ಅಕ್ಕಿ ಕೈತಪ್ಪಿ ಹೋಗುತ್ತದೆ ಎಂದು ಜನ ಚಿಂತಿತರಾಗಿದ್ದಾರೆ.
 ರಜಾ ದಿನವಾದರೂ ತಿಂಗಳಾಂತ್ಯವಾಗಿದ್ದರಿಂದ ಪಡಿತರ ವಿತರಣೆಗೆ ಸೂಚಿಸಲಾಗಿದ್ದು, ಗುರುವಾರ ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾದರೂ ಒಂದೇ ಒಂದು ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ಬಳಿಕ ಸ್ವಲ್ಪಮಟ್ಟಿಗೆ ಸರ್ವರ್ ಸಮಸ್ಯೆ ಬಗೆಹರಿದಿದೆ.

ಥಂಬ್ ಸಮಸ್ಯೆ

ತ್ರಾಸಿಯ ನ್ಯಾಯಬೆಲೆ ಅಂಗಡಿಯಲ್ಲಿ ಬೆಳಗ್ಗೆ ಬೇಗನೆ ಜನ ಬಂದು ಕುಳಿತರೂ ವೆಬ್‌ಸೈಟ್ 9.30ರಿಂದ ತೆರೆದರೂ ಸರ್ವರ್ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ. ಒಬ್ಬರಿಗೆ ಥಂಬ್ ಕೊಡಲು ಕನಿಷ್ಠ 20 ನಿಮಿಷಕ್ಕೂ ಹೆಚ್ಚು ಸಮಯ ಬೇಕು. ಒಂದು ಥಂಬ್ ತೆಗೆದುಕೊಂಡರೂ ಇನ್ನೊಂದು ಥಂಬ್ ತೆಗೆದುಕೊಳ್ಳದೆ ಸಮಸ್ಯೆಯಾಗುತ್ತಿದೆ. ಮೊದಲೆಲ್ಲ ದಿನಕ್ಕೆ 150ರಿಂದ 170ರವರೆಗೆ ಪಡಿತರ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ ಈಗ ದಿನಕ್ಕೆ ಕನಿಷ್ಠ 60 ಜನರಿಗೂ ಕೊಡಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನ, ಸಂಜೆ 6ರ ಬಳಿಕ ಹಾಗೂ ರಾತ್ರಿ 8.30ರ ಬಳಿಕ ಸ್ವಲ್ಪ ವೇಗದಲ್ಲಿ ಆಗುತ್ತದೆ ಎನ್ನುತ್ತಾರೆ ಇಲ್ಲಿನ ನ್ಯಾಯಬೆಲೆ ಅಂಗಡಿ ಸಿಬ್ಬಂದಿ.

ಸುಡುವ ಬಿಸಿಲಿನ ನಡುವೆ ದಿನವಿಡೀ ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈಗ ಶಾಲೆಗಳಿಗೂ ರಜೆ ಇರುವುದರಿಂದ ಮಕ್ಕಳನ್ನೂ ಕರೆದುಕೊಂಡು ಬರುತ್ತಾರೆ. ಸರತಿ ಸಾಲಿನಲ್ಲಿ ನಿಂತಿರುವುದರಿಂದ ಮಧ್ಯಾಹ್ನದ ವೇಳೆ ಊಟಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಜೆವರೆಗೆ ಕಾದರೂ ಕೆಲವೊಮ್ಮೆ ಅಕ್ಕಿ ಸಿಗದೆ ವಾಪಸ್ ಹೋಗುತ್ತಾರೆ. ತಿಂಗಳೊಳಗೆ ಅಕ್ಕಿ ತೆಗೆದುಕೊಂಡು ಹೋಗದಿದ್ದರೆ ಮುಂದಿನ ತಿಂಗಳು ಅದನ್ನು ಪಡೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು.

— ಮಿಥುನ್ ದೇವಾಡಿಗ ತ್ರಾಸಿ ಗ್ರಾಪಂ ಮಾಜಿ ಅಧ್ಯಕ್ಷ