ಉಡುಪಿಯ ವಿದ್ಯೋದಯ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಗಳ ಆರಂಭೋತ್ಸವವನ್ನು ವಿಶ್ವಪ್ರಸನ್ನ ಶ್ರೀ ಉದ್ಘಾಟಿಸಿದರು. ಎನ್​. ನಾಗರಾಜ್​ ಬಲ್ಲಾಳ್​, ಎನ್​.ಆರ್​. ದಾಮೋದರ್​ ಶರ್ಮ, ಯು. ಪದ್ಮರಾಜ ಆಚಾರ್ಯ, ರೂಪಾ ಬಲ್ಲಾಳ್​, ಸಂದೀಪ್​ ಕುಮಾರ್​, ರಂಜನಾ ಕೆ. ಇತರರಿದ್ದರು. 
ಉಡುಪಿ

ನಿರಂತರ ಶ್ರಮದಿಂದ ಯಶಸ್ಸು ಸಿದ್ಧಿ

* ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ

* ವಿದ್ಯೋದಯ ಪ.ಪೂ. ಕಾಲೇಜಿನಲ್ಲಿ ಪ್ರಾರಂಭೋತ್ಸವ

ಉಡುಪಿ: ದೇಶಸುತ್ತು-ಕೋಶ ಓದು ಎಂಬ ಮಾತಿನಂತೆ ವಿದ್ಯಾರ್ಜನೆಯಿಂದ ಸಾಧನೆ ಸುಲಭವಾಗುತ್ತದೆ. ಸಾಧನೆಗಾಗಿ ನಿರಂತರ ಶ್ರಮ ವಹಿಸಿದಲ್ಲಿ ಯಶಸ್ಸು ಸಿದ್ಧಿಸುತ್ತದೆ. ವಿದ್ಯಾರ್ಥಿಗಳೆಲ್ಲ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡುವಂತಾಗಲಿ ಎಂದು ವಿದ್ಯೋದಯ ಟ್ರಸ್ಟ್​ನ ಅಧ್ಯಕ್ಷರು, ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಿತವಚನ ನುಡಿದರು.
ಉಡುಪಿ ವಿದ್ಯೋದಯ ಟ್ರಸ್ಟ್​ (ರಿ.)ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ (ಜೂ.5) ಆಯೋಜಿಸಿದ್ದ 2026-27ನೇ ಸಾಲಿನ ಪ್ರಥಮ ವರ್ಷದ ತರಗತಿಗಳ ಆರಂಭೋತ್ಸವ, ಪ್ರತಿಭಾ ಪುರಸ್ಕಾರ, ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ನಿಶ್ಚಿತ ಗುರಿಯಿರಲಿ

ಖ್ಯಾತ ವಾಗ್ಮಿ ಎನ್​.ಆರ್​. ದಾಮೋದರ್​ ಶರ್ಮ ಬಾರ್ಕೂರು ಮಾತನಾಡಿ, ಭಾರತೀಯ
ಗುರು ಪರಂಪರೆ ಮೂಢ ನಂಬಿಕೆಯಲ್ಲ. ಅದು ಗಾಢ ನಂಬಿಕೆ ಹೊಂದಿದೆ. ಎಲ್ಲೋ ಹುಟ್ಟಿದ ನದಿ ಸಮುದ್ರ ಸೇರುವಂತೆ ಎಲ್ಲೋ ಪುಟ್ಟ ತೊರೆಯಾಗಿರುವ ನೀವು ನಿಮ್ಮ ಗುರಿಯೆಡೆಗೆ ಸಾಗಬೇಕು. ಶಿಕ್ಷಣದಿಂದ ನಿಷ್ಠೆ, ಸ್ವಾಭಿಮಾನ ಹಾಗೂ ಸಾರ್ಥಕ ಬದುಕು ಕಂಡುಕೊಳ್ಳಿರಿ ಎಂದು ಹಾರೈಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಕಾಲೇಜಿನ ಪ್ರಾಂಶುಪಾಲ ಸಂದೀಪ್​ ಕುಮಾರ್​ ಮಾತನಾಡಿ, ಸಂಸ್ಥೆಯ ಸಾಧನೆಗಳ ಮಾಹಿತಿ ನೀಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್​ ಗಳಿಸಿದ ಹಾಗೂ ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯೋದಯ ಟ್ರಸ್ಟ್​ನ ಕಾರ್ಯಾಧ್ಯಕ್ಷ ಎನ್​. ನಾಗರಾಜ್​ ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ, ಯು. ಪದ್ಮರಾಜ ಆಚಾರ್ಯ, ಸಹ ಕಾರ್ಯದರ್ಶಿ ರೂಪಾ ಬಲ್ಲಾಳ್​ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ರಂಜನಾ ಕೆ. ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥೆ ಶುಭಾ ಎಸ್​. ಕಾಮತ್​ ರ್ಯಾಂಕ್​ ವಿಜೇತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಕುಂತಲಾ ಆರ್​. ಪಾಲನ್​ ವಂದಿಸಿದರು. ಕನ್ನಡ ಉಪನ್ಯಾಸಕ ನಾಗೇಂದ್ರ ಐತಾಳ್​ ಕಾರ್ಯಕ್ರಮ ನಿರ್ವಹಿಸಿದರು.