ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಸೇರಿದಂತೆ ಕೇರಳಂ 140 ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಶಾಂತಿಯುತವಾಗಿ ಕೊನೆಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶೇ. 78.07 ಮತದಾನ ದಾಖಲಾಗಿದೆ.
ಮಂಜೇಶ್ವರ ಶೇ.78.87, ಉದುಮ ಶೇ.76.94, ಕಾಞಂಗಾಡು ಶೇ.76.21 ಹಾಗೂ ತ್ರಿಕ್ಕರಿಪುರ ಶೇ.78.17 ಮತದಾನ ದಾಖಲಾಗಿದೆ. ಬೆಳಗ್ಗೆ 7ಕ್ಕೆ ಮತದಾನ ಆರಂಭಗೊಂಡಿದ್ದು, ಇದಕ್ಕೂ ಮೊದಲು ಅಣಕು ಮತದಾನ ನಡೆಸುವ ಮೂಲಕ ಮತಯಂತ್ರಗಳ ಕಾರ್ಯನಿರ್ವಹಣೆ ಖಚಿತಪಡಿಸಲಾಯಿತು.
ಕೆಲವೊಂದು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಕಂಡುಬಂದಿದ್ದರೂ, ಮತದಾನಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಮಂಜೇಶ್ವರ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಸಿಬ್ಬಂದಿಯ ವಿಳಂಬ ಧೋರಣೆಯಿಂದ ಮತದಾನ ನಿಧಾನಗತಿಯಿಂದ ಸಾಗುವಂತಾಗಿತ್ತು. ಪೆರ್ಲದ 215ನೇ ಮತಗಟ್ಟೆಯಲ್ಲಿ ಮತದಾನದ ಕಾಲಾವಧಿ ಕಳೆದ ನಂತರವೂ ಸರತಿ ಸಾಲಲ್ಲಿದ್ದ ನೂರಕ್ಕೂ ಹೆಚ್ಚು ಮಂದಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ನಕಲಿ ಮತದಾನಕ್ಕೆ ಪ್ರಯತ್ನ ನಡೆದಿದ್ದು ಪೊಲೀಸ್ ಕಾರ್ಯಾಚರಣೆಯಿಂದ ವಿಫಲವಾಗಿದೆ. ಬಿಸಿಲಿನ ತಾಪದ ನಡುವೆಯೂ ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದೆ. ಫಲಿತಾಂಶಕ್ಕಾಗಿ ಇನ್ನೂ 24 ದಿನ ಮತದಾರರು ಕಾಯಬೇಕಾಗಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನಂತರ ನಡೆದ ಪ್ರಥಮ ಚುನಾವಣೆ ಇದಾಗಿದ್ದು, ಸ್ವಾಭಾವಿಕವಾಗಿ ಮತದಾನ ಶೇಕಡಾವಾರು ಹೆಚ್ಚಳಗೊಂಡಿದೆ.