ಕುಲಪತಿ ಪ್ರೊ.ಸಿದ್ದು ಪಿ. ಅಲ್ಗೂರ್ ಅವರೊಂದಿಗೆ ಪೇಟೆಂಟ್ ಪಡೆದ ಸಂಶೋಧಕರು.
ಕಾಸರಗೋಡು: ಪರಿಸರ ಸ್ನೇಹಿ ರಾಸಾಯನಿಕ ಉತ್ಪಾದನೆ ಮತ್ತು ಕನಿಷ್ಠ ತ್ಯಾಜ್ಯದೊಂದಿಗೆ ಇಂಧನ ಉತ್ಪಾದನೆಗೆ ಸಹಕಾರಿಯಾಗುವ ವೇಗವರ್ಧಕವನ್ನು ತಯಾರಿಸುವ ಹೊಸ ವಿಧಾನವೊಂದನ್ನು ಅಭಿವೃದ್ಧಿಪಡಿಸಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್‌ನ ಸಂಶೋಧಕರಿಗೆ ಪೇಟೆಂಟ್ ಲಭ್ಯವಾಗಿದೆ.
ವೇಗವರ್ಧಕ ತಯಾರಿಸಿದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎ.ಶಕ್ತಿವೇಲ್, ಸಹ-ಸಂಶೋಧಕರಾದ ನಿಮಿಷಾ ಎನ್.ಪಿ. ಮತ್ತು ಡಾ.ಸೌಮ್ಯಾ ಬಿ.ಎನ್. ಅವರಿಗೆ ಪೇಟೆಂಟ್ ನೀಡಲಾಗಿದೆ. *ITQ-2 Metal Oxy-Hydroxide Composite Materials Thereof’ ಎಂಬ ಆವಿಷ್ಕಾರಕ್ಕಾಗಿ ಈ ಗೌರವ ನೀಡಲಾಗಿದೆ. ಈ ತಂತ್ರಜ್ಞಾನವು ರಾಸಾಯನಿಕ ಪ್ರಕ್ರಿಯೆಗಳ ದಕ್ಷತೆಯನ್ನು ಹೆಚ್ಚಿಸುವ ಜತೆಗೆ ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳಿಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕನಿಷ್ಠ ಪ್ರಮಾಣದ ರಾಸಾಯನಿಕ ತ್ಯಾಜ್ಯದೊಂದಿಗೆ ಇಂಧನಗಳು ಮತ್ತು ಮೌಲ್ಯಯುತ ರಾಸಾಯನಿಕಗಳ ಉತ್ಪಾದನೆಗೆ ಅನುವು ಮಾಡಿಕೊಡುವ ಮೂಲಕ ಈ ಆವಿಷ್ಕಾರವು ವಿವಿಧ ಸಾಧ್ಯತೆಗಳ ಹೊಸ ಲೋಕವನ್ನೇ ತೆರೆದಿಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪೇಟೆಂಟ್ ಪಡೆದ ಸಂಶೋಧನಾ ತಂಡವನ್ನು ಅಭಿನಂದಿಸಿರುವ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್, ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಸಂಶೋಧಕರಲ್ಲಿ ಮುಂದಿನ ಹಂತಕ್ಕೆ ಸಾಗಲು ಈ ಸಾಧನೆ ಆತ್ಮವಿಶ್ವಾಸ ತುಂಬಲಿದೆ ಎಂದು ತಿಳಿಸಿದ್ದಾರೆ.