ಉಡುಪಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ದೂರದ ಊರಿನಿಂದ ಆಗಮಿಸಿದ ಪ್ರಯಾಣಿಕರ ಬಳಿ ಗಲಾಟೆ ಮಾಡಿ ಹೆಚ್ಚಿನ ಹಣ ಕೇಳಿ ಪಡೆಯುತ್ತಿರುವ ಸುಲಭ ಶೌಚಾಲಯದ ಸಿಬ್ಬಂದಿ. 
ಉಡುಪಿ

'ಸುಲಭ' ಶೌಚಾಲಯಗಳಲ್ಲಿ 'ಲೂಟಿ'

* ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ

* ತರಾತುರಿಯಲ್ಲಿ ಬರುವ ಪ್ರಯಾಣಿಕರ ಸುಲಿಗೆ

ಉಡುಪಿ: ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಬೀಡಾಗಿರುವ ಉಡುಪಿ ಜಿಲ್ಲೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು, ಯಾತ್ರಿಕರು ಹಾಗೂ ಪ್ರಯಾಣಿಕರು ಆಗಮಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸುಲಭ ಶೌಚಾಲಯಗಳು ಪ್ರಯಾಣಿಕರ ಹಣ ಲೂಟಿ ಮಾಡುತ್ತಿವೆ.
ಉಡುಪಿಯ ಬನ್ನಂಜೆಯಲ್ಲಿರುವ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ಸಿಟಿ ಹಾಗೂ ಸರ್ವೀಸ್​ ಬಸ್​ ನಿಲ್ದಾಣಗಳಲ್ಲಿರುವ ಸುಲಭ ಶೌಚಾಲಯಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಹೆಸರಿಗಷ್ಟೇ ಸುಲಭ

ಜಿಲ್ಲೆಯ ವಿವಿಧೆಡೆ ಇರುವ ಸಾರ್ವಜನಿಕ ಸುಲಭ ಶೌಚಾಲಯಗಳು ಹೆಸರಿಗೆ ಮಾತ್ರ "ಸುಲಭ'ವಾಗಿದ್ದು, ಸಾಮಾನ್ಯ ಜನರ ಜೇಬಿಗೆ ಸುಲಭವಾಗಿಯೇ ಕತ್ತರಿ ಹಾಕತೊಡಗಿವೆ. ಮೂತ್ರ ವಿಸರ್ಜನೆ ಉಚಿತವಾಗಿದ್ದು, ಮಲ ವಿಸರ್ಜನೆಗೆ 4 ರೂ. ದರ ನಿಗದಿ ಮಾಡಲಾಗಿದೆ. ಆದರೂ ವಿವಿಧೆಡೆ ಇರುವ ಸಾರ್ವಜನಿಕ ಶೌಚಾಲಯಗಳಲ್ಲಿ ನಿರ್ವಹಣೆಯ ಗುತ್ತಿಗೆ ಪಡೆದ ಕೆಲವರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಬಸ್​ನ ಮೂಲಕ ಆಗಮಿಸುವ ಪ್ರಯಾಣಿಕರು ತರಾತುರಿಯಲ್ಲಿ ಶೌಚಾಲಯಕ್ಕೆ ಬಂದರೆ ಹೆಚ್ಚಿನ ಹಣ ಕೊಡುವಂತಾಗಿದೆ.

ಜನರಿಂದ 10 ರೂ. ವಸೂಲಿ

ಉಡುಪಿಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿರುವ ಸುಲಭ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿ ತೆರಳುವವರ ಬಳಿಯೂ ಹಣ ಕೇಳುತ್ತಿದ್ದಾರೆ. ಅಲ್ಲದೆ, ಮಲ ವಿಸರ್ಜನೆ ಮಾಡಿ ಬಂದವರ ಬಳಿ 10 ರೂ. ಪಡೆಯುತ್ತಿದ್ದಾರೆ. 4ರೂ. ಬದಲಾಗಿ 10 ರೂ. ಪಡೆಯುವುದು ಯಾಕೆಂದು ಪ್ರಶ್ನಿಸುವವರೊಂದಿಗೆ ಅಲ್ಲಿರುವ ಸಿಬ್ಬಂದಿ ಜಗಳಕ್ಕಿಳಿಯುತ್ತಾರೆ. ಹೆಚ್ಚಿನ ಹಣ ಕೊಡುವವರೆಗೂ ಪೀಡಿಸುತ್ತಾರೆ. ಮತ್ತೆ ಮುಂದಿನ ಪ್ರಯಾಣ ಮಾಡಬೇಕಿದ್ದರಿಂದ ಕೆಲವರು ಗತಿಯಿಲ್ಲದೆ 10 ರೂ. ಕೊಟ್ಟು ತೆರಳುತ್ತಿದ್ದಾರೆ. ಇದು ಉಡುಪಿಯ ಖ್ಯಾತಿಗೂ ಕಳಂಕ ತರಲಿದೆ. 

ದೂರು ಬಂದರೂ ಅಧಿಕಾರಿಗಳ ಮೌನವೇಕೆ?

"

ಉಡುಪಿ ಹಾಗೂ ಜಿಲ್ಲೆಯಲ್ಲಿರುವ ಅನೇಕ ಸುಲಭ ಶೌಚಾಲಯಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದು ಪ್ರಯಾಣಿಕರ ಸುಲಿಗೆ ಮಾಡಲಾಗುತ್ತಿದೆ. ದುರುಪಯೋಗದಿಂದ ಲಾಭ ಮಾಡಿಕೊಳ್ಳುವುದು ಅಕ್ಷಮ್ಯ ಅಪರಾಧ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿಮಾರ್ಣವಾದ ಸರ್ಕಾರಿ ಸೌಲಭ್ಯಗಳು ಯಾರಿಗೋ ಲಾಭದ ಮೂಲವಾಗಬಾರದು. ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಶೌಚಾಲಯಗಳ ನಿರ್ವಹಣಾದಾರರ ಪರವಾನಗಿ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಕರವೇ ವತಿಯಿಂದ ಪ್ರತಿಭಟಿಸಬೇಕಾಗುತ್ತದೆ.