ಉಡುಪಿಯ ರಾಜಾಂಗಣದಲ್ಲಿ ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ 'ಪಾರ್ಥ ಸಾರಥಿ' ಸ್ವರ್ಣ ಲೇಪಿತ ರಥವನ್ನು ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ಶ್ರೀಕೃಷ್ಣನಿಗೆ ಸಮರ್ಪಿಸಿದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.
* ಪರ್ಯಾಯ ಸುಗುಣೇಂದ್ರ ಶ್ರೀಗಳಿಂದ ಕೊಡುಗೆ
* ಬಂಗಾರದ ತೇರು ಸಮರ್ಪಿಸಿದ ಮಂತ್ರಾಲಯ ಶ್ರೀ
ಉಡುಪಿ: ನಮ್ಮ ಚತುರ್ಥ 'ವಿಶ್ವ ಗೀತಾ' ಪರ್ಯಾಯದಲ್ಲಿ ಅನೇಕ ಯೋಜನೆಗಳು ಸಮರ್ಪಿಸಲ್ಪಟ್ಟಿದ್ದು, ಪರ್ಯಾಯದ ಮುಕ್ತಾಯದ ಹಂತದಲ್ಲಿ ಮುಖ್ಯ ಯೋಜನೆಯಾದ ಸ್ವರ್ಣ ಲೇಪಿತ "ಪಾರ್ಥ ಸಾರಥಿ' ರಥವನ್ನು ಕನಕಪ್ರಿಯನಾದ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಿದ್ದೇವೆ. ನಮ್ಮ ಸನ್ಯಾಸ ಜೀವನದ 50ನೇ ವರ್ಷದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ನಮ್ಮ ಆರಾಧ್ಯ ದೇವನಾದ ಶ್ರೀಕೃಷ್ಣನಿಗೆ 'ಗೋಲ್ಡನ್ ಜುಬಿಲಿ ಗಿಫ್ಟ್' ನೀಡಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಸಂಜೆ (ಡಿ.26) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವರ್ಣ ಲೇಪಿತ 'ಪಾರ್ಥ ಸಾರಥಿ' ರಥವನ್ನು ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಿ ಆಶೀರ್ವಚನ ನೀಡಿದರು.
ದ್ವೈವಾರ್ಷಿಕ ಪಂಚ ಯೋಜನೆ
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ನೀಡುವಂತೆ ನಮ್ಮ ಪರ್ಯಾಯದ ನಿಮಿತ್ತ ದ್ವೈವಾರ್ಷಿಕ ಪಂಚ ಯೋಜನೆಯ ಪ್ರಣಾಳಿಕೆ ಘೋಷಣೆ ಮಾಡಿದ್ದೆವು. ಅದರಲ್ಲಿ ನಾಲ್ಕು ಯೋಜನೆ ಪೂರ್ಣಗೊಂಡಿದ್ದು, ಕಲ್ಸಂಕದಲ್ಲಿ ಸ್ವಾಗತ ಗೋಪುರ ನಿರ್ಮಾಣವು ತಾಂತ್ರಿಕ ದೋಷದಿಂದ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಕಾರ್ಯಗತ ಮಾಡಲಾಗುವುದು. ಯಾರು ವಿಶ್ವದ ಅಧಿಪತಿಯೋ ಅವರ ಬಳಿ ಶ್ರೇಷ್ಠವಾದ ವಸ್ತುಗಳಿರಬೇಕು. ಹೀಗಾಗಿ ಭಗವಂತನಾದ, ವಿಶ್ವಕ್ಕೆ ಗುರುವಾಗಿರುವ ಶ್ರೀಕೃಷ್ಣನಿಗೆ ಲೋಹಗಳಲ್ಲಿಯೇ ಶ್ರೇಷ್ಠವಾದ ಸ್ವರ್ಣದಿಂದ ತಯಾರಿಸಿದ ರಥವನ್ನು ನೀಡಿದ್ದೇವೆ. ಶ್ರೀಕೃಷ್ಣನ ನಿತ್ಯ ಪೂಜೆಯ ವೇಳೆ ದೇಗುಲದ ಒಳಗೆ ಶ್ರೀಕೃಷ್ಣನಿಗೆ ರಥೋತ್ಸವ ನಡೆಯಲಿದೆ ಎಂದರು.
ಕರ್ತವ್ಯ ಪ್ರಜ್ಞೆ ಜಾಗೃತವಾಗಲಿ
ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸ್ವಯಂ ಪಾರ್ಥ ಸಾರಥಿಯಾದ ಶ್ರೀಕೃಷ್ಣನಿಗೆ ಸ್ವರ್ಣಮಯ ಪಾರ್ಥ ಸಾರಥಿ ರಥ ಸಮರ್ಪಣೆಯ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಸುಗುಣೇಂದ್ರರ ವಿಶ್ವ ಗೀತಾ ಪರ್ಯಾಯದ ಸಂದರ್ಭದಲ್ಲಿ ಆ ಸೌಭಾಗ್ಯ ನಮಗೊದಗಿ ಬಂದಿದೆ. ಈಗಾಗಲೇ ಶ್ರೀಗಳು ಕೃಷ್ಣನಿಗೆ ನವರತ್ನದ ರಥವೂ ಸೇರಿ ವಿವಿಧ ರಥ ಸಮರ್ಪಿಸಿದ್ದಾರೆ. 50 ವರ್ಷದ ಸನ್ಯಾಸ ಜೀವನದಲ್ಲಿ ಅವರ ಧಾರ್ಮಿಕ ಕಾರ್ಯ ಅನನ್ಯ. ಅವರು 100-120 ವರ್ಷ ಬಾಳುವಂತಾಗಬೇಕು. ಅದರಿಂದ ಇನ್ನಷ್ಟು ಧಾರ್ಮಿಕ ಯೋಜನೆ ಕಾರ್ಯಗತವಾಗಲಿದೆ. ಈ ರಥ ಸಮರ್ಪಣೆಯಿಂದ ಶ್ರೀಕೃಷ್ಣನ ಅನುಗ್ರಹದಿಂದ ವಿಶ್ವದ ಎಲ್ಲರಿಗೂ ಕರ್ತವ್ಯ ಪ್ರಜ್ಞೆ ಜಾಗೃತವಾಗಲಿ. ಗೀತಾಚಾರ್ಯನ ಗೀತೆಯ ಸಂದೇಶ ಜಗದಗಲ ಇನ್ನಷ್ಟು ಪಸರಿಸಲಿ. ನಮ್ಮ ಚಿನ್ನವನ್ನು ಬ್ಯಾಂಕ್ನಲ್ಲಿ ಡಿಪಾಸಿಟ್ ಮಾಡಿದಾಗ ನಮಗೆ ಬಡ್ಡಿ ನೀಡುವ ಯೋಜನೆ ಆರ್ಬಿಐ ಜಾರಿಗೊಳಿಸಿದೆ. ಅದರಂತೆ ಜಗದೊಡೆಯನಿಗೆ ಶ್ರೇಷ್ಠವಾದ ಸ್ವರ್ಣವನ್ನು ಸಮರ್ಪಿಸಿದರೆ ಆತ ಜೀವನ ಪರ್ಯಂತ ಅನಂತವಾದ ಅನುಗ್ರಹವೆಂಬ ಬಡ್ಡಿಯನ್ನು ನಮಗೆಲ್ಲ ನೀಡುತ್ತಾನೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಗುರುರಾಜ, ವಿದ್ವಾಂಸ ಹರಿದಾಸ್ ಭಟ್, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗೋ ಮಧುಸೂದನ್ ಮೈಸೂರು, ಜಯಕರ್ ಶೆಟ್ಟಿ ಇಂದ್ರಾಳಿ, ಆನೆಗುಡ್ಡೆ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ಕಟೀಲು ಹರಿನಾರಾಯಣ ಆಸ್ರಣ್ಣ, ರಾಜೇಶ್ ಶೆಟ್ಟಿ, ಸ್ವರ್ಣ ರಥದ ಸೇವೆ ನೀಡಿದ ಅಮೆರಿಕದ ರಾಮಪ್ರಿಯ ಪದ್ಮಜಾ ದಂಪತಿ, ಪಾದೇಬೆಟ್ಟು ಸುಬ್ರಹ್ಮಣ್ಯ ಆಚಾರ್ಯ, ರಾಘವೇಂದ್ರನ್ ವಿ., ಕಲಾವಿದ ಗಂಜೀಫಾ ರಘುಪತಿ ಭಟ್, ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ರಮೇಶ್ ಭಟ್ ಇತರರು ಉಪಸ್ಥಿತರಿದ್ದರು.
ಮಠದ ಶಿಷ್ಯ ರಾಘವೇಂದ್ರ ಆಚಾರ್ಯ ವೇದಘೋಷ ಪಠಿಸಿದರು. ಮಠದ ವಿದ್ವಾಂಸ ಡಾ. ಬಿ. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ನಗರದಲ್ಲಿ ಬೃಹತ್ ಶೋಭಾಯಾತ್ರೆ
ರಥ ಸಮರ್ಪಣೆ ನಿಮಿತ್ತ ಜೋಡುಕಟ್ಟೆಯಿಂದ ಉಡುಪಿ ಮಠದ ವರೆಗೆ "ಪಾರ್ಥ ಸಾರಥಿ' ರಥದ ವೈಭವದ ಶೋಭಾಯಾತ್ರೆಗೆ ಮಂತ್ರಾಲಯ ಸುಬುಧೇಂದ್ರ ಶ್ರೀಗಳು ಚಾಲನೆ ನೀಡಿದರು. ವಿವಿಧ ವಾದ್ಯ, ಕುಣಿತ ಭಜನೆ, ಟ್ಯಾಬ್ಲೋಗಳ ಆಕರ್ಷಣೆಯೊಂದಿಗೆ ಸಾವಿರಾರು ಜನರು ಮೆರವಣಿಗೆ ನಡೆಸಿದರು. ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಯಕರ್ ಶೆಟ್ಟಿ ಇಂದ್ರಾಳಿ. ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ ಇತರರು ಇದ್ದರು. ರಥಬೀದಿಗೆ ಆಗಮಿಸಿದ ರಥದಲ್ಲಿ ಪರ್ಯಾಯ ಉಭಯ ಶ್ರೀಗಳು ಹಾಗೂ ಮಂತ್ರಾಲಯ ಶ್ರೀಗಳನ್ನು ರಥದೊಂದಿಗೆ ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಕರೆತರಲಾಯಿತು.