ಉಡುಪಿ ಇಂದ್ರಾಳಿಯಲ್ಲಿರುವ ರೈಲ್ವೆ ನಿಲ್ದಾಣ.
* ಎರಡು ಬಾರಿ ದೂರಿನ ಬಳಿಕ ಎಚ್ಚೆತ್ತುಕೊಂಡ ಕೊಂಕಣ ರೈಲ್ವೆ
ಉಡುಪಿ: ಇಂದ್ರಾಳಿಯಲ್ಲಿರುವ ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಪಾರ್ಕಿಗ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡು ಬಾರಿ ದೂರು ಸಲ್ಲಿಸಿದ ಬಳಿಕ ಕೊಂಕಣ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಪೊಲೀಸರ ಮುಂದಾಳತ್ವದಲ್ಲಿ ರೈಲು ನಿಲ್ದಾಣದ ಪಾರ್ಕಿಂಗ್ ಸಿಬ್ಬಂದಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.
ಆ.12ರಂದು ಮುಂಬಯಿಯಿಂದ ಉಡುಪಿಗೆ ಆಗಮಿಸಿದ್ದ ಪ್ರಯಾಣಿಕರೊಬ್ಬರು ರೈಲು ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಿಬ್ಬಂದಿಗೆ ಸರಿಯಾಗಿ ವಾಹನ ನಿಲ್ಲಿಸುವಂತೆ ಮನವಿ ಮಾಡಿದ್ದರು.
ಈ ವೇಳೆ ಪಾರ್ಕಿಂಗ್ ಸಿಬ್ಬಂದಿ ಅನುಚಿತ ಹಾಗೂ ಅವಮಾನಕರ ರೀತಿಯಲ್ಲಿ ವರ್ತಿಸಿದ್ದನು. ಇದರಿಂದ ನೊಂದ ಆ ಪ್ರಯಾಣಿಕ ಘಟನೆಗೆ ಸಂಬಂಧಿಸಿ ರೈಲ್ವೆಯ "ರೇಲ್ ಮದದ್' ವ್ಯವಸ್ಥೆಯ ಮೂಲಕ ದೂರು ದಾಖಲಿಸಿದ್ದರು.
ಒಮ್ಮೆ ದೂರು ನೀಡಿದಾಗ ಸಮರ್ಪಕವಾಗಿ ಪರಿಹಾರವಾಗಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ದೂರು ಸಲ್ಲಿಸಲಾಗಿತ್ತು. ಎರಡು ಬಾರಿ ದೂರು ನೀಡಿದ ಬಳಿಕ ವಿಷಯವು ಆರ್ಪಿಎಫ್ ಪೊಲೀಸರ ಗಮನಕ್ಕೆ ಬಂದಿದೆ. ಅವರ ಮಧ್ಯಸ್ಥಿಕೆಯಲ್ಲಿ ಪಾರ್ಕಿಂಗ್ ಸಿಬ್ಬಂದಿ ಆ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆಗೆ ಮನವಿ
ಸಿಬ್ಬಂದಿಯ ಅನುಚಿತ ವರ್ತನೆ ವಿರುದ್ಧ ದೂರು ದಾಖಲಿಸಿದ ಪ್ರಯಾಣಿಕರ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ದೂರು ದಾಖಲಾಗಿದ್ದ ಪಾರ್ಕಿಗ್ ಸಿಬ್ಬಂದಿಗೆ ನೀಡಲಾಗಿದೆ. ಆತ ಪ್ರಯಾಣಿಕರಿಗೆ ಕರೆ ಮಾಡಿ, 'ದೂರು ಯಾಕೆ ನೀಡಿದ್ದೀರಿ?' ಎಂದು ಗಲಾಟೆ ಮಾಡಿದ್ದಾನೆ. 'ರೇಲ್ ಮದದ್'ಗೆ ದೂರು ಸಲ್ಲಿಸುವಾಗ ನೀಡಿದ ತನ್ನ ಮೊಬೈಲ್ ಸಂಖ್ಯೆಯನ್ನು ಪಾರ್ಕಿಂಗ್ ಸಿಬ್ಬಂದಿಗೆ ನೀಡಿರುವುದು ಪ್ರಯಾಣಿಕರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ದೂರು ನಿರ್ವಹಣೆಯ ಪಾರದರ್ಶಕತೆಯ ಉಲ್ಲಂನೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ, ದೂರುದಾರರ ಮೊಬೈಲ್ ಸಂಖ್ಯೆ ಪಾರ್ಕಿಂಗ್ ಸಿಬ್ಬಂದಿಗೆ ಹೇಗೆ ತಲುಪಿತು ಎಂಬುದರ ಕುರಿತು ತನಿಖೆ ನಡೆಸುವಂತೆ ರೈಲ್ವೆ ಇಲಾಖೆಗೆ ಪ್ರಯಾಣಿಕ ಮನವಿ ಮಾಡಿದ್ದಾರೆ. ಈ ಕುರಿತು ಸ್ಥಳಿಯ ಶಾಸಕರು, ಸಂಸದರು, ರೈಲ್ವೆ ಸಚಿವರು ಹಾಗೂ ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕರಿಗೂ ದೂರು ಸಲ್ಲಿಸಲಾಗಿದೆ.
ನಿತ್ಯ ಅನುಚಿತ ವರ್ತನೆ
ರೈಲ್ವೆ ನಿಲ್ದಾಣದಲ್ಲಿರುವ ಪಾರ್ಕಿಂಗ್ ಸಿಬ್ಬಂದಿ ವಾಹನ ನಿಲ್ಲಿಸಲು ಬರುವ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವುದು ಇಲ್ಲಿ ಪದೇಪದೇ ಸಂಭವಿಸುತ್ತಲೇ ಇದೆ. ವೃದ್ಧರು, ಮಹಿಳೆಯರನ್ನು ನಿಲ್ದಾಣಕ್ಕೆ ಬಿಟ್ಟು ಹೋಗಲು ಬರುವ ಕಾರು ಮಾಲೀಕರು, ಚಾಲಕರಿಂದ ಹಣ ಪಡೆಯಲು ಬರುತ್ತಾರೆ. ವಾಹನ ಪಾರ್ಕಿಂಗ್ ಮಾಡಿ ರೈಲ್ವೆಯಲ್ಲಿ ಪ್ರಯಾಣ ಮಾಡುವವರ ಬಳಿ ಹಣ ಪಡೆಯಬಹುದು. ಆದರೆ, ಸಂಬಂಧಿಕರನ್ನು ಬಿಡಲು ಬರುವ ವಾಹನದವರಿಂದಲೂ ಪಾರ್ಕಿಂಗ್ ಸಿಬ್ಬಂದಿ 20 ರೂ. ಹಣ ಪಡೆಯುತ್ತಾರೆ. ಎದೆಷ್ಟು ಸರಿ ಎಂದು ಅನೇಕ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಸಂಸದರಿಗೆ ಈ ವಿಚಾರವಾಗಿ ತಿಳಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈಲ್ವೆ ಪ್ರಯಾಣದ ದರಕ್ಕಿಂತ ಕಾರ್ ಅಥವಾ ಇನ್ನಿತರ ವಾಹನಗಳ ಪಾರ್ಕಿಂಗ್ಗೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರೈಲ್ವೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.