ಉಡುಪಿ ತಾಲೂಕಿನ ಮಣಿಪುರ ಗ್ರಾಪಂ ವ್ಯಾಪ್ತಿಯ ದೆಂದೂರುಕಟ್ಟೆಯ ಪೆಟ್ರೋಲ್​ ಪಂಪ್​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವುದು. 
ಉಡುಪಿ

ನಿಲ್ಲಿಸಿಟ್ಟಿದ್ದ ಖಾಸಗಿ ಬಸ್​ ಬೆಂಕಿಗಾಹುತಿ

ಉಡುಪಿ ದೆಂದೂರುಕಟ್ಟೆ ಪೆಟ್ರೋಲ್​ ಪಂಪ್​ ಬಳಿ ಘಟನೆ

ಉಡುಪಿ: ತಾಲೂಕಿನ ಮಣಿಪುರ ಗ್ರಾಪಂ ವ್ಯಾಪ್ತಿಯ ದೆಂದೂರುಕಟ್ಟೆಯ ಪೆಟ್ರೋಲ್​ ಪಂಪ್​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​ನಲ್ಲಿ ಶುಕ್ರವಾರ (ಸೆ.25) ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್​ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬಸ್​ಗೆ ಬೆಂಕಿ ಬದ್ದಿರುವುದನ್ನು ಗಮನಿಸಿದ ಪೆಟ್ರೋಲ್​ ಪಂಪ್​ನ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾದರು. ಸಮೀಪದಲ್ಲೇ ಇನ್ನೆರಡು ಬಸ್​ ಹಾಗೂ ಟೆಂಪೋವನ್ನೂ ನಿಲ್ಲಿಸಲಾಗಿತ್ತು. ಉಡುಪಿ-ಮೂಡುಬೆಳ್ಳೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ಕೃಷ್ಣ ಪ್ರಸಾದ್​ ಹೆಸರಿನ ಸರ್ವೀಸ್​ ಬಸ್​ ಇದಾಗಿದ್ದು, ಬೆಳಗಿನ ಜಾವ 3:30ರ ಸುಮಾರಿಗೆ ಈ ಘಟನೆ ನಡೆದಿದೆ.

ಪಕ್ಕದಲ್ಲೇ ಪೆಟ್ರೋಲ್​ ಪಂಪ್​ ಇದ್ದು, ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಪೆಟ್ರೋಲ್​ ಪಂಪ್​ನ ಹಾಗೂ ಬೆಂಕಿಗಾಹುತಿಯಾದ ಬಸ್​ನ ಮಾಲೀಕರು ಒಬ್ಬರೇ ಆಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿಯೂ ಸ್ಥಳಕ್ಕಾಗಮಿಸುವಷ್ಟರಲ್ಲಿ ಬಸ್​ ಬಹುತೇಕ ಬೆಂಕಿಗೆ ಆಹುತಿಯಾಗಿತ್ತು ಎನ್ನಲಾಗಿದೆ.