ಉಡುಪಿಯಲ್ಲಿ ಹೆಜ್ಜೆ ಗೆಜ್ಜೆ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ದಾಸ&ಪದ&ವೈಭವಂ ಸಮಾರೋಪ ಸಮಾರಂಭವನ್ನು ಮದ್ದೂರು ಪಿ. ಬಾಲಸುಬ್ರಹ್ಮಣ್ಯಂ ಉದ್ಘಾಟಿಸಿದರು. ಶ್ರೀಧರ್ ಹೊಳ್ಳ, ಪ್ರತಿಮಾ ಶ್ರೀಧರ್, ಸುಧೀರ್ ರಾವ್, ಲಕ್ಷ್ಮೀ ಗುರುರಾಜ್, ಗೌರಿ ಸಾಗರ್, ಯಶಾ ರಾಮಕೃಷ್ಣ ಇದ್ದರು.
* ಪಾಲಕರಿಗೆ ವಿದ್ವಾನ್ ಶ್ರೀಧರ್ ಹೊಳ್ಳ ಕರೆ
* ದಾಸ-ಪದ-ವೈಭವ ಸಮಾರೋಪ
ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಭರತನಾಟ್ಯದ ಅನೇಕ ಗುರುಗಳು ಕ್ರಿಯಾತ್ಮಕ ಪ್ರಯೋಗಗಳಿಂದ ಈ ಕಲೆಯ ಹೊಳಪು ಹೆಚ್ಚಿಸಿದ್ದಾರೆ. ವಿದುಷಿ ದೀಾ ರಾಮಕೃಷ್ಣ ಅವರು ಪುರಂದರ ದಾಸರ ಕೃತಿಗಳನ್ನು ಸ್ವಯಂ ಹಾಡುತ್ತ, ನರ್ತಿಸಿ ವಿಶ್ವ ದಾಖಲೆ ಮಾಡಿರುವುದು ಭರತನಾಟ್ಯ ಕಲೆಯ ಉನ್ನತಿಯ ಪ್ರತೀಕವಾಗಿದೆ. ನೃತ್ಯ ಕ್ಷೇತ್ರದ ಇನ್ನಷ್ಟು ಬೆಳವಣಿಗೆಗಾಗಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರೆತರಬೇಕು. ಅವರನ್ನು ಕಲಾಸಕ್ತರಾಗುವಂತೆ ಮಾಡಬೇಕು ಎಂದು ಮಂಗಳೂರಿನ ಭರತಾಂಜಲಿಯ ಪ್ರಮುಖ ವಿದ್ವಾನ್ ಶ್ರೀಧರ್ ಹೊಳ್ಳ ಕರೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹೆಜ್ಜೆ ಗೆಜ್ಜೆ ಫೌಂಡೇಶನ್ ಉಡುಪಿ-ಮಣಿಪಾಲದ ವತಿಯಿಂದ ಭಾನುವಾರ ಸಂಜೆ (ಜ.4) ಆಯೋಜಿಸಿದ್ದ ದಾಸ-ಪದ-ವೈಭವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ಸಂಗೀತ ಗುರು ವಿದ್ವಾನ್ ಮದ್ದೂರು ಪಿ. ಬಾಲಸುಬ್ರಹ್ಮಣ್ಯಂ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ದಾಸರ ಸ್ಮರಣಾರ್ಥ ಆಯೋಜನೆ
ಹೆಜ್ಜೆ ಗೆಜ್ಜೆ ಫೌಂಡೇಷನ್ನ ಸ್ಥಾಪಕಿ ವಿದುಷಿ ಯಶಾ ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕನಕದಾಸ ಜಯಂತಿ ನಿಮಿತ್ತ ನ.8ರಿಂದ 'ದಾಸ-ಪದ-ವೈಭವಂ' ಶೀರ್ಷಿಕೆಯಡಿ ಉಡುಪಿಯ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ನ.29ರಂದು ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ, ಡಿ.7ರಂದು ಭಕ್ತಿ ಗಾನ ಲಹರಿ ಗಾಯನ ಸ್ಪರ್ಧೆ, ಜ.3ರಂದು ದೀಕ್ಷಾ ರಾಮಕೃಷ್ಣ ಅವರಿಂದ ಪುರಂದರ ಗಾನ ನರ್ತನ ಪ್ರದರ್ಶನ ನಡೆದಿದ್ದು ಅದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿರ್ಮಿಸಿದೆ. ದಾಸರ ಕೊಡುಗೆಗಳನ್ನು ಸ್ಮರಿಸಲು ಸುಮಾರು 2 ತಿಂಗಳ ಕಾಲ ವಿವಿಧ ಸಂಗೀತ-ನಾಟ್ಯ ಕಾರ್ಯಕ್ರಮ ನಡೆಸಲಾಗಿದ್ದು ಇಂದು ಸಂಪನ್ನಗೊಂಡಿದೆ ಎಂದರು.
ಹಿರಿಯ ಗುರುಗಳಿಗೆ ಸನ್ಮಾನ
ಭರತಾಂಜಲಿ ಮಂಗಳೂರಿನ ವಿದುಷಿ ಪ್ರತಿಮಾ ಶ್ರೀಧರ್, ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ವಿದುಷಿ ವೀಣಾ ಸಾಮಗ, ಉಡುಪಿಯ ಲಕ್ಷ್ಮೀ ಗುರುರಾಜಸ್ (ಎನ್ಎನ್ಯು)ನ ವಿದುಷಿ ಲಕ್ಷ್ಮೀ ಗುರುರಾಜ್, ಕೊಡವೂರು ನೃತ್ಯ ನಿಕೇತನದ ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್, ಬೆಂಗಳೂರಿನ ವಿದುಷಿ ಗೌರಿ ಸಾಗರ್, ಬೆಂಗಳೂರಿನ ವಿದ್ವಾನ್ ಯೋಗೇಶಕುಮಾರ್ ಹಾಗೂ ಸ್ನೇಹಾ ನಾರಾಯಣ ಉಪಸ್ಥಿತರಿದ್ದರು. ಈ ಎಲ್ಲ ಹಿರಿಯ ಕಲಾವಿದರ ಕಲಾ ಸೇವೆಯ ಹಿನ್ನೆಲೆಯಲ್ಲಿ ನಾಟ್ಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿದುಷಿ ದೀಕ್ಷಾ ರಾಮಕೃಷ್ಣ ಪ್ರಾರ್ಥಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಮಕೃಷ್ಣ ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹೆಜ್ಜೆ ಗೆಜ್ಜೆ ತಂಡದಿಂದ ನೃತ್ಯ, ಬೆಂಗಳೂರಿನ ವಿದುಷಿ ಗೌರಿ ಸಾಗರ್ ಅವರಿಂದ 'ಶ್ರೀ ವಿನೋದ' ಏಕವ್ಯಕ್ತಿ ನೃತ್ಯ, ಭರತಾಂಜಲಿ ಮಂಗಳೂರು, ಲಕ್ಷ್ಮೀ ಗುರುರಾಜಸ್, ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಹಾಗೂ ನೃತ್ಯನಿಕೇತನ ಕೊಡವೂರಿನ ಶಿಷ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.