ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ 
ಉಡುಪಿ

ಕಾಂಗ್ರೆಸ್‌ನ ದ್ವೇಷದ ರಾಜಕೀಯಕ್ಕೆ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್

ಕಾರ್ಕಳ: ಅನೇಕ ವಿವಾದ, ಆರೋಪ ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿರುವ ಮಹಾತ್ವಕಾಂಕ್ಷಿ ಯೋಜನೆಯ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ನಡೆದಿರುವುದು ತೀವ್ರ ನೋವು ತಂದಿದೆ. ದುಷ್ಕರ್ಮಿಗಳು ಬಾಗಿಲು ಒಡೆದು ಮೇಲ್ಛಾವಣಿ ಸಂಪೂರ್ಣ ಕಿತ್ತು ಹಾಕಿ ತಾಮ್ರದ ಹೊದಿಕೆ ಕಳವು ಮಾಡಿದ್ದು ಕಾರ್ಕಳದ ಇತಿಹಾಸದಲ್ಲಿ ಇದು ದುರ್ದೈವದ ಸಂಗತಿ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ. ಥೀಮ್ ಪಾರ್ಕ್ ಪಾಳು ಬಿದ್ದಿರುವುದು ಅಸೂಯೆ ಮತ್ತು ರಾಜಕೀಯ ದ್ವೇಷದ ಫಲ ಎಂದು ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ಗೆ ಭೇಟಿ ನೀಡಿ, ಪಾರ್ಕ್‌ನ ಸದ್ಯದ ಸ್ಥಿತಿ ಕಂಡು ಸುದ್ದಿಗಾರರೊಂದಿಗೆ ಬೇಸರ ವ್ಯಕ್ತಪಡಿಸಿದರು.
ಇದು ನನ್ನ ಕನಸಿನ ಯೋಜನೆ. ಪ್ರವಾಸೋದ್ಯಮದ ದೃಷ್ಟಿಯಿಂದ ವಿಜೃಂಭಿಸಬೇಕಾಗಿದ್ದ ಸ್ಥಳ ಇಂದು ಗಿಡಗಂಟಿಗಳಿಂದ ತುಂಬಿ ನಿರ್ಜನವಾಗಿದೆ. ಇದನ್ನು ಈ ಸ್ಥಿತಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಮಂಜೂರು ಮಾಡಿದ ನಾಲ್ಕೂವರೆ ಕೋಟಿ ರೂ. ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಬೇಕು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಕು ಎಂದರು.
ಸಾವಿರಾರು ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ
ಜ.11ರಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ. ಜಿಲ್ಲಾಡಳಿತ ಸ್ವಚ್ಛಗೊಳಿಸದಿದ್ದರೆ ನಾವೇ ಮಾಡುತ್ತೇವೆ. ಮಕರ ಸಂಕ್ರಾಂತಿಯ ದಿನದಿಂದ ಒಂದು ತಿಂಗಳು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಇಲಾಖೆ ಮಾಡದಿದ್ದರೆ ನಾವೇ ಮಾಡುತ್ತೇವೆ ಎಂದು ಸುನೀಲ್ ಕುಮಾರ್ ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದುಗಳ ಭಾವನೆಗಳ ಮೇಲೆ ನಿರಂತರ ಅವಹೇಳನ ನಡೆಯುತ್ತಿದೆ. ಇದು ಸರ್ಕಾರದ ತುಷ್ಟೀಕರಣ ನೀತಿಯ ಪರಿಣಾಮ ಎಂದು ಆರೋಪಿಸಿದರು.