ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್ 
ಉಡುಪಿ

ಪರಶುರಾಮ ಥೀಂ ಪಾರ್ಕ್​ ಬಗ್ಗೆ ಸೂಕ್ತ ತೀರ್ಮಾನ: ಸಚಿವ ರಿಜ್ವಾನ್​

ಉಡುಪಿ: ಪರಶುರಾಮ ಥೀಮ್​ ಪಾರ್ಕ್​ ನಿಮಾರ್ಣವಾಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಪಾರ್ಕ್​ ನಿಮಾರ್ಣಕ್ಕೆ ಟೆಂಡರ್​ ನೀಡಿದ್ದು, ಕಂಚಿನ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದು ಕೂಡ ಬಿಜೆಪಿಯವರೇ. ಆದರೆ ಈಗ ವಿವಾದ ಸೃಷ್ಟಿಸಿ, ಕಾಂಗ್ರೆಸ್​ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್​ ಪಕ್ಷವನ್ನು ದೂಷಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಈ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಶುರಾಮ ಥೀಮ್​ ಪಾರ್ಕ್​ ನಿಮಾರ್ಣಕ್ಕೆ ಕಾಂಗ್ರೆಸ್​ ಕೂಡ ಬೆಂಬಲ ನೀಡಿತ್ತು. ಆದರೆ ಪಾರ್ಕ್​ ನಿಮಾರ್ಣದ ಬಳಿಕ ಬೆಳವಣಿಗೆಗಳು ಜಿಲ್ಲೆಯ ಜನರಿಗೆ ತಿಳಿದಿದೆ. ಉಡುಪಿ ಜಿಲ್ಲೆಯ ಜನರು ಪ್ರಜ್ಞಾವಂತರಾಗಿದ್ದು, ಬಿಜೆಪಿ ನಾಯಕರು ಪದೇಪದೇ ಹಿಂದಿನ ವಿಚಾರಗಳನ್ನು ಮರೆತಂತೆ ವರ್ತಿಸಬಾರದು ಎಂದರು.

ಪಾರ್ಕ್​ ನಿರ್ಮಿಸಿ, ಬಳಿಕ ಸಮಸ್ಯೆ ಸೃಷ್ಟಿಸಿ ಈಗ ನೀವೇ ಪ್ರತಿಭಟನೆ ನಡೆಸಿ ಜನರ ಆಕ್ರೋಶಕ್ಕೆ ಗುರಿಯಾಗಬೇಡಿ. ಈ ಸಮಸ್ಯೆ ಉದ್ಭವಿಸಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಈಗಲೂ ಸಮಸ್ಯೆಗೆ ಬಿಜೆಪಿಯೇ ಹೊಣೆ. ಇದರಲ್ಲಿ ಕಾಂಗ್ರೆಸ್​ನ ಯಾವುದೇ ಪಾತ್ರವಿಲ್ಲ ಎಂದು ಸ್ಪಫ್ಟಿಪಡಿಸಿದರು. ಈ ವಿಚಾರ ನ್ಯಾಯಾಲಯದಲ್ಲಿದ್ದ ಕಾರಣ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ನ್ಯಾಯಾಲಯದ ಆದೇಶ ಬಂದಿದೆ. ಸೂಕ್ತ ಸಮಯದಲ್ಲಿ ಥೀಮ್​ ಪಾರ್ಕ್​ ಅನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ಬಗ್ಗೆ ಸಭೆ

ಜಿಲ್ಲಾಸ್ಪತ್ರೆ ಬಗ್ಗೆ ಖಾದರ್​ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ. ಜಿಲ್ಲೆಯ ಎಲ್ಲಾ ಐದು ಶಾಸಕರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರಕೈಗೊಳ್ಳಲಾಗುವುದು. ಖಾದರ್​ ಭರವಸೆ ನೀಡಿದ್ದಾರೆ. ಹಳೆ ಆಸ್ಪತ್ರೆಯಿಂದ ಎಲ್ಲವರನ್ನೂ ಬಿಟ್ಟು ಬರಲು ಸಾಧ್ಯವಿಲ್ಲ. ಹೊಸ ಮನೆ ಕಟ್ಟಿದ ಮೇಲೆ ಹಳೆ ಮನೆ ಎಲ್ಲಾ ಫರ್ನಿಚರ್​ಗಳನ್ನು ಬಿಸಾಕಿಬಿಟ್ಟು ಹೋಗ್ಬಿಡ್ತೀರಾ? ಅದರಲ್ಲಿ ಉಪಯೋಗಕ್ಕೆ ಬರತಕ್ಕಂತಹ, ಹೊಸ ಫರ್ನಿಚರ್​, ವಸ್ತುಗಳನ್ನು ತಗೊಂಡು ಹೋಗ್ತೀವಿ. ಅದೇ ರೀತಿ ತುಕ್ಕು ಹಿಡಿದಿರತಕ್ಕಂತಹ ಬೆಡ್​ಗಳನ್ನು ತರಲ್ಲ. ಆದರೆ ಯಾವುದು ಹಳೆ ಆಸ್ಪತ್ರೆಯಿಂದ ತರಬಾರದು ಎಂಬುದು ಸರಿಯಲ್ಲ. ಹೀಗಾಗಿ ಆರೋಗ್ಯ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿ

ಸರ್ಕಾರದಲ್ಲಿ ಫಂಡ್​ ಇಲ್ಲದೆ ಇದ್ದರೆ ಕಾರ್ಯಕ್ರಮ ಹೇಗೆ ಆಗುತ್ತವೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದ ಸಾಮಾನ್ಯ ಜನರಿಗೆ ಗ್ಯಾರಂಟಿ ಕಾರ್ಯಕ್ರಮದ ಮೂಲಕ ಅನುಕೂಲ ಮಾಡಿಕೊಟ್ಟಿದ್ದೀವಿ. ಆದರೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಅದೇ ಕಾರಣಕ್ಕೆ ಗ್ಯಾರಂಟಿಗಳ ಮುಖಾಂತರ ಸಾಮಾನ್ಯ ಜನರಿಗೆ ನೆರವು ನೀಡುತ್ತಿದ್ದೇವೆ. ಮೂರೂವರೆ ವರ್ಷ ಗ್ಯಾರಂಟಿ ಕೊಟ್ಟಿದ್ದೇವೆ. ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತಿನೂ ಜನರ ಪರವಾಗಿ ಕೆಲಸ ಮಾಡುತ್ತಿದೆ. ಇದು ಜನರ ಪರವಾಗಿ ಇರತಕ್ಕಂತಹ ಕಾರ್ಯಕ್ರಮ. ಹೀಗಾಗಿ ಸರ್ಕಾರ ನಡೆಸುವಾಗ ಎಲ್ಲಿಂದ ಖರ್ಚು ಮಾಡಬೇಕು ಎಂಬುದಕ್ಕಿಂತ ಯಾತಕ್ಕೋಸ್ಕರ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಬಿಜೆಪಿಯವರು ಎಲ್ಲಾ ನಿಯಮ ಪ್ರಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಎಂಪಿಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ

ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿಗಳು ಸ್ವತಃ ಮಾತಾಡಿದ್ದಾರೆ. ಖಾದರ್​ ಅವರು 12 ದಿನ ಸಮಯ ಕೇಳಿದ್ದಾರೆ. ಇದು ಬರೀ ರಾಜ್ಯ ಸರ್ಕಾರದ ಸಮಸ್ಯೆ ಅಲ್ಲ. ಹೀಗಾಗಿ 18 ಜನ ಬಿಜೆಪಿ ಸಂಸದರು ಕೂಡ ಆಶಾ ಕಾರ್ಯಕರ್ತರ ಪರವಾಗಿ ಕೇಂದ್ರ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಲಿ. ಮುಖ್ಯಮಂತ್ರಿಗಳು ಜಪಾನ್​ ಬಿಸಿನೆಸ್​ ವಿಸಿಟ್​ಗೆ ಹೋಗಿದ್ದಾರೆ. ಅವರು ಬಂದ ಮೇಲೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ, ಶೀಘ್ರದಲ್ಲೇ ಸೂಕ್ತ ತೀಮಾರ್ನ ಕೈಗೊಳ್ಳುತ್ತೇವೆ ಎಂದರು.