ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಗುಂಡಿಬಿದ್ದಿರುವುದು.
ಬಂಟ್ವಾಳ: ಮುಂಗಾರು ಆರಂಭವಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳು ಗುಂಡಿ ಬಿದ್ದು ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಹೆದ್ದಾರಿ ಕಾಮಗಾರಿ ವೇಳೆ ಪಾಣೆಮಂಗಳೂರು ದೈವಸ್ಥಾನ ಭಾಗದಲ್ಲಿ ಅಗೆದಿರುವ ರಸ್ತೆಗೆ ಕಾಂಕ್ರೀಟ್ ಹಾಕದೆ ಡಾಮರು ಮಿಶ್ರಣ ಸುರಿಯಲಾಗಿದ್ದು, ಭಾರಿ ಮಳೆಗೆ ರಸ್ತೆಯ ಡಾಂಬಾರು ಸಂಪೂರ್ಣ ಕಿತ್ತುಹೋಗಿದೆ. ಮಳೆಗೆ ಹೊಂಡಗಳಲ್ಲಿ ಕೆಸರು ಮಿಶ್ರಿತ ನೀರು ತುಂಬಿದ್ದು, ಗುಂಡಿಗಳ ಆಳದ ಅರಿವಿಲ್ಲದೆ ವಾಹನ ಚಾಲಕರು ಪದೇಪದೆ ಅವಘಡಕ್ಕೆ ತುತ್ತಾಗುತ್ತಿದ್ದು, ರಾತ್ರಿ ವೇಳೆ ಸಂಚಾರ ತೀರಾ ಅಪಾಯಕಾರಿಯಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹೆದ್ದಾರಿ ಸರ್ವೀಸ್ ರಸ್ತೆಯ ಸಮಸ್ಯೆ ಕುರಿತು ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.