ಹಿರಿಯ ಸಾಹಿತಿ ಹಾಗೂ ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂಪಂಚಮಿ ಪುರಸ್ಕಾರ ಸ್ವೀಕರಿಸಿದರು.
ಉಡುಪಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದಾಗಿ ಭಾರತದಲ್ಲಿ 5 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಲಿದೆ. ಮಕ್ಕಳ ಸೃಜನಶೀಲ ಮನಸ್ಸು ಭಸ್ಮವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನಡೆದ ಸಂಸ್ಕೃತಿ ಉತ್ಸವದಲ್ಲಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ ಮತ್ತು ಮನಸ್ಸಿನ ಭಾವನೆಯನ್ನು ಇದರಿಂದ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಎಐ ಆಪತ್ತು ಎದುರಿಸಲು ಯುವಜನತೆ ಸಜ್ಜಾಗಬೇಕು. ಜೊತೆಗೆ ಎಐ ಅನುಕೂಲತೆಗಳನ್ನು ಸ್ವಾಗತಿಸಬಹುದು ಎಂದರು.
ಹಸಿರು ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಕೆರೆ, ತೋಟಗಳು ಸೈಟ್ಗಳಾಗಿ ಬದಲಾಗುತ್ತಿವೆ. ಕೋವಿಡ್ ಸಮಯದಲ್ಲಿ ನಮಗೆಲ್ಲಾ ಆಕ್ಸಿಜನ್ ಮಹತ್ವ ಆರಿವಾಗಿದೆ. ಹುಟ್ಟಿನಿಂದ ಸಾಯುವವರೆಗೆ ಆಕ್ಸಿಜನ್ ನೀಡುವ ಪ್ರಕೃತಿಯನ್ನು ರಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷ ರಂಗಾಯಣ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್ ಹಾಗೂ ಪಂಚಮಿ ಟ್ರಸ್ಟ್ ಸಂಸ್ಥಾಪಕ ಡಾ. ಎಂ. ಹರೀಶ್ಚಂದ್ರ, ಸಾಹಿತಿ ಗಿರೀಶ್ ಹತ್ವಾರ್ (ಜೋಗಿ), ಪ್ರತಿಷ್ಠಾನ ಸಂಸ್ಥಾಪಕ ವಿಶ್ವನಾಥ್ ಶೆಣೈ, ಉದ್ಯಮಿ ಸುಗುಣ ಸುವರ್ಣ, ಭುವನ್ ಪ್ರಸಾದ್ ಹೆಗ್ಡೆ, ಪ್ರೊ. ಶಂಕರ್, ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಭಾಷಣ ಮಾಡಿದರು. ಆಸ್ಟ್ರೊ ಮೋಹನ್ ಸ್ವಾಗತಿಸಿ, ಜನಾರ್ದನ್ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ನಂತರ ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರಿಂದ 'ಗುಲಾಮನ ಸ್ವಾತಂತ್ರ್ಯ ಯಾತ್ರೆ' ಪ್ರದರ್ಶನಗೊಂಡಿತು.