ಕುಕ್ಕೆ ಸುಬ್ರಹ್ಮಣ್ಯ- ಹರಿಹರ ಪಳ್ಳತ್ತಡ್ಕ ಮೂಲಕ ಪಂಚ ಗ್ರಾಮಗಳ ಸಂಪರ್ಕ ಸೇತುವೆಯಾಗಿರುವ ಗುಂಡಡ್ಕ ಸೇತುವೆಗೆ ಮರದ ದಿಮ್ಮಿಗಳು ಬಡಿದು ಶಿಥಿಲಗೊಂಡಿರುವುದರಿಂದ ಶೀಘ್ರವೇ ಸೇತುವೆ ದುರಸ್ತಿ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಹರಿಹರ ಪಳ್ಳತ್ತಡ್ಕ ಸಂಪರ್ಕಿಸುವ ಮುಖ್ಯರಸ್ತೆಯ ಹರಿಹರ ಸಮೀಪ ಹರಿಯುತ್ತಿರುವ ಹೊಳೆಗೆ ಸೇತುವೆ ನಿರ್ಮಾಣಗೊಂಡಿದ್ದು, ಮಳೆಗಾಲದಲ್ಲಿ ಪದೇಪದೇ ಮುಳುಗುವುದರಿಂದ ಮುಳುಗು ಸೇತುವೆ ಎಂದೇ ಹೆಸರುವಾಸಿಯಾಗಿದೆ. 50 ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣಗೊಂಡಿದ್ದು, ಸುಬ್ರಹ್ಮಣ್ಯ ಭಾಗದಿಂದ ಐನೆಕಿದು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಮಳೆಗಾಲದಲ್ಲಿ ಕೊಚ್ಚಿಕೊಂಡು ಬರುವ ಮರದ ಬೃಹತ್ ದಿಮ್ಮಿಗಳು ಸೇತುವೆ ಅಡಿಯಲ್ಲಿ ಸಿಲುಕಿಕೊಂಡಿದ್ದು ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ. ಸಿಲುಕಿಕೊಂಡಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸದ ಕಾರಣ ಸೇತುವೆಯ ಗುಣಮಟ್ಟಕ್ಕೆ ಇದು ಅಡಚಣೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಗುಣಮಟ್ಟ ಪರೀಕ್ಷೆಗೆ ಆಗ್ರಹ
ಮೇಲ್ನೋಟಕ್ಕೆ ಸೇತುವೆ ಉತ್ತಮವಿರುವಂತೆ ಕಂಡರೂ ಹಳೆಯದಾಗಿರುವುದರಿಂದ ಸೇತುವೆ ಶಿಥಿಲಗೊಂಡಿರುವ ಸಾಧ್ಯತೆಯೇ ಹೆಚ್ಚು. ಸಂಬಂಧಿತ ಅಧಿಕಾರಿಗಳ ನೇತೃತ್ವದಲ್ಲಿ ಸೇತುವೆ ಗುಣಮಟ್ಟ, ಸುರಕ್ಷತೆಯ ತಪಾಸಣೆ ಆಗಬೇಕಿದೆ. ಹಾನಿಯಾಗಿದ್ದರೆ ಕೂಡಲೇ ದುರಸ್ತಿಗೊಳಿಸಬೇಕು. ಅಧಿಕಾರಿಗಳು ಈ ಕುರಿತು ಉಡಾಫೆ ತೋರಿದರೆ ಭವಿಷ್ಯದಲ್ಲಿ ಹಲವು ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿ ಶಾಶ್ವತವಾಗಿ ಕಳೆದುಕೊಳ್ಳಬಹುದು. ಜತೆಗೆ ಮರದ ದಿಮ್ಮಿಗಳನ್ನೂ ತೆರವುಗೊಳಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುಣಮಟ್ಟ ಕಡಿಮೆ
ಇತ್ತೀಚೆಗಿನ ವರ್ಷಗಳಲ್ಲಿ ಎರಡು ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಭಾಗದಿಂದ ಹರಿದು ಬರುವ ಹೊಳೆ ಇದಾಗಿದ್ದು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲೇ ಭಾರಿ ಪ್ರಮಾಣದಲ್ಲಿ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಈ ಸೇತುವೆಯ ಕಂಬಗಳಿಗೆ ಬಡಿಯುವುದರಿಂದ ಸೇತುವೆ ಕಂಬಗಳಿಗೆ ಹಾನಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸೇತುವೆ ಗುಣಮಟ್ಟ ಕಡಿಮೆಯಾಗುತ್ತಲೇ ಇದೆ. ಮರಗಳು ಕೊಚ್ಚಿಕೊಂಡು ಬಂದು ಬಡಿಯುತ್ತಿದ್ದರೆ ಸೇತುವೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹರಿಹರದ ಗುಂಡಡ್ಕ ಸೇತುವೆ ಬಗ್ಗೆ ಪರಿಶೀಲಿಸಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಸೇತುವೆಯ ಗುಣಮಟ್ಟ ಪರಿಶೀಲನೆಗೂ ಈಗಾಗಲೇ ಪತ್ರ ವ್ಯವಹಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟ ಪರಿಶೀಲನೆ ನಡೆಸಲಾಗುವುದು. ಸೇತುವೆಯ ಅಡಿ ಭಾಗದಲ್ಲಿ ಸಿಲುಕಿರುವ ದಿಮ್ಮಿಗಳ ತೆರವು ಮಾಡಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗುವುದು.