ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿದರು.
ವಿಜಯವಾಣಿ ಸುದ್ದಿಜಾಲ ಮಂಗಳೂರು
ಕ್ರೈಸ್ತ ಸಮುದಾಯದವರು ಭಾನುವಾರ ಭಕ್ತಿಯಿಂದ ಗರಿಗಳ ಭಾನುವಾರ (ಪಾಮ್ ಸಂಡೇ) ಹಬ್ಬವನ್ನು ಆಚರಿಸಿದರು. ಮಂಗಳೂರಿನ ಎಲ್ಲ ಚರ್ಚ್‌ಗಳಲ್ಲಿ ಆಚರಣೆ ನಡೆಯಿತು. ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆಗಳು ನಡೆದವು. ಈ ಮೂಲಕ ಕ್ರೈಸ್ತರ ಪವಿತ್ರ ವಾರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಂಗಳೂರಿನ ವೆಲೆನ್ಸಿಯಾ ಚರ್ಚ್, ರೊಸಾರಿಯಾ, ಮಿಲಾಗ್ರಿಸ್ ಚರ್ಚ್, ಬಿಕರ್ನಕಟ್ಟೆ, ಬೆಂದೂರ್, ಬಿಜೈ, ಬಲ್ಮಠ, ಕುಲಶೇಖರ, ಉರ್ವ, ಬೋಳಾರ, ಲೇಡಿಹಿಲ್, ಅಶೋಕನಗರ, ಕೂಳೂರು ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ಪಾಮ್ ಸಂಡೇ ಆಚರಣೆ ನಡೆಸಲಾಯಿತು.
ಬಿಷಪ್ ಆಶೀರ್ವಚನ
ಸುರತ್ಕಲ್ ವಲಯದ ಮುಕ್ಕಾದ ಪವಿತ್ರಾತ್ಮ ಚರ್ಚ್‌ನಲ್ಲಿ ಮುಖ್ಯ ಸಮಾರಂಭದ ನೇತತ್ವವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ವಹಿಸಿದ್ದರು. ತಾಳೆಗರಿಗಳನ್ನು ಆಶೀರ್ವದಿಸಿದ ಅವರು, ಈ ಹಬ್ಬ ಯೇಸುವಿನ ತ್ಯಾಗದ ಹಾದಿಯಲ್ಲಿ ಜತೆಯಾಗಲು ಮತ್ತು ಅವರನ್ನು ನಮ್ಮ ಹದಯಕ್ಕೆ ಸ್ವಾಗತಿಸಲು ನೀಡುವ ಕರೆ ಎಂದು ಸಂದೇಶ ನೀಡಿದರು. ಮುಕ್ಕದ ಧರ್ಮಗುರು ರೆವರೆಂಡ್ ಸ್ಟ್ಯಾನಿ ಪಿಂಟೋ ಮತ್ತು ಮಂಗಳೂರು ಐಸಿವೈಎಂನ ನಿಯೋಜಿತ ನಿರ್ದೇಶಕ ರೆವರೆಂಡ್ ಪ್ರವೀಣ್ ಡಿಸೋಜ ಬಲಿಪೂಜೆಯಲ್ಲಿ ಇದ್ದರು.
ಏನು ಈ ಹಬ್ಬದ ವಿಶೇಷ?
ಶಿಲುಬೆಗೆ ಏರುವ ವಾರದ ಮೊದಲು ಅಂದಿನ ಜೆರುಸಲೇಂ ಪಟ್ಟಣವನ್ನು ಯೇಸುಕ್ರಿಸ್ತರು ಪ್ರವೇಶಿಸುವಾಗ ಯಹೂದಿ ಸಮುದಾಯದವರು ಆಲಿವ್ ಮರದ ಗರಿಗಳಿಂದ ದಾರಿಗಳನ್ನು ಸಿಂಗರಿಸಿ ಅವರನ್ನು ಬರಮಾಡಿಕೊಂಡರು ಎನ್ನುವ ನಂಬಿಕೆಯ ಮೇಲೆ ಈ ಹಬ್ಬದ ಆಚರಣೆಯು ಪ್ರತೀವರ್ಷವೂ ನಡೆಯುತ್ತದೆ. ಕರಾವಳಿಯಲ್ಲಿ ವಿಶೇಷವಾಗಿ ತೆಂಗಿನ ಎಳೆಗರಿಗಳನ್ನು ಬಳಸಲಾಗುತ್ತದೆ. ಧರ್ಮ ಗುರುಗಳು ಚರ್ಚ್‌ಗಳಲ್ಲಿ ಪವಿತ್ರ ಕೃತಜ್ಞತಾ ಪೂಜೆ ಮೊದಲು ಗರಿಗಳನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ ನಂತರ ಗರಿಗಳ ಪೂಜೆ ಮಾಡುತ್ತಾರೆ. ಆಯಾ ವಾರ್ಡ್‌ಗಳ ಗುರಿಕಾರರ ಮೂಲಕ ಕೆಥೋಲಿಕ್ ಕುಟುಂಬಗಳಿಗೆ ಗರಿಗಳನ್ನು ಹಂಚುತ್ತಾರೆ. ಈ ಗರಿಗಳನ್ನು ಹಿಡಿದು ಮೆರವಣಿಗೆಯ ಮೂಲಕ ಚರ್ಚ್‌ಗಳಿಗೆ ಬರಲಾಗುತ್ತದೆ. ಅಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಡೆದ ಬಳಿಕ ಆ ಗರಿಗಳನ್ನು ಪಡೆದು ಕ್ರೈಸ್ತ ಸಮುದಾಯದವರು ಶಿಲುಬೆಯ ಪ್ರತಿರೂಪ ರಚಿಸಿ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ.
ಫೊಟೋ..................ಎಂಎನ್‌ಜಿ ಮಾ. 29 ಮುಕ್ಕ 1-3
ಮುಕ್ಕಾದ ಪವಿತ್ರಾತ್ಮ ಚರ್ಚ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಆಶೀರ್ವಚನ ನೀಡಿದರು. ಧರ್ಮಗುರು ಾ.ಸ್ಟಾೃನಿ ಪಿಂಟೋ ಮಂಗಳೂರು ಐಸಿವೈಎಂನ ನಿಯೋಜಿತ ನಿರ್ದೇಶಕ ಾ. ಪ್ರವೀಣ್ ಡಿಸೋಜಾ ಬಲಿಪೂಜೆಯಲ್ಲಿ ಇದ್ದರು.
ಧರ್ಮಗುರುಗಳಿಂದ ಸಂದೇಶ
ಉಡುಪಿ: ಗರಿಗಳ ಭಾನುವಾರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಪಾಮ್ ಸಂಡೆ ಆಚರಣೆ ಜಿಲ್ಲಾದ್ಯಂತ ಕ್ರೈಸ್ತರಿಂದ ಶ್ರದ್ಧಾಭಕ್ತಿಯಿಂದ ನಡೆಯಿತು.
ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ದೇವಾಲಯದಲ್ಲಿ ನಡೆದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಪ್ರದೀಪ್ ಕಾರ್ಡೊಜಾ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಚರ್ಚುಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಬಲಿಪೂಜೆ ನೆರವೇರಿಸಲಾಯಿತು. ಎಲ್ಲ ಚರ್ಚುಗಳಲ್ಲಿ ಪಾಮ್ ಸಂಡೆಯ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು. ಉಡುಪಿ ಶೋಕವಾತಾ ದೇವಾಲಯದಲ್ಲಿ ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ವಾತಾ ಚರ್ಚಿನಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ನಿಯೋಜಿತ ಬಿಷಪ್ ಡಾ. ಲೆಸ್ಲಿ ಸಿ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ದೇವಾಲಯಲ್ಲಿ ಧರ್ಮಗುರು ಡೆನಿಸ್ ಡೆಸಾ, ಸಾಸ್ತಾನ ಚರ್ಚಿನಲ್ಲಿ ಸುನೀಲ್ ಡಿಸಿಲ್ವಾ, ಉಪಸ್ಥಿತಿಯಲ್ಲಿ ವಿಶೇಷ ಪೂಜೆ ನಡೆಯಿತು.
ಪವಿತ್ರ ಸಪ್ತಾಹ
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಗುರುವಾರ ತನ್ನ ಶಿಷ್ಯರೊಂದಿಗೆ ಯೇಸುವಿನ ಕೊನೆಯ ಭೋಜನ ಹಾಗೂ ಶಿಷ್ಯರ ಪಾದಗಳನ್ನು ತೊಳೆದ ದಿನವನ್ನು ಸ್ಮರಿಸಲಾಗುತ್ತದೆ. ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಫ್ರೈಡೆ ಆಚರಿಸಲಾಗುತ್ತದೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.