ಪಳ್ಳತ್ತಡ್ಕದಲ್ಲಿ ಮತ್ತೆ ರಾಡಿಯೆದ್ದಿರುವ ರಸ್ತೆ. 
ಉಡುಪಿ

ಮಳೆಗೆ ಮತ್ತೆ ರಾಡಿಯೆದ್ದ ಪಳ್ಳತ್ತಡ್ಕ ರಸ್ತೆ

ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕ ಪ್ರದೇಶ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮತ್ತೆ ರಾಡಿಯೆದ್ದಿದೆ. ಚೆರ್ಕಳದಿಂದ ಉಕ್ಕಿನಡ್ಕವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 29 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡು ಕಾಮಗಾರಿಗೆ ಚಾಲನೆ ನೀಡಿದ್ದರೂ, ಮಳೆ ಶುರುವಾಗಿರುವುದರಿಂದ ಈ ವರ್ಷವೂ ಹೊಂಡದಿಂದ ಕೂಡಿದ ರಸ್ತೆಯಲ್ಲೇ ವಾಹನಗಳು ಸಂಚರಿಸುವಂತಾಗಿದೆ.
ಎಡರಂಗ ಸರ್ಕಾರದ ಕಾಲಾವಧಿಯಲ್ಲೇ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು, ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದ ಹಿನ್ನೆಲೆ ಕಾಮಗಾರಿ ಆರಂಭ ವಿಳಂಬಗೊಂಡಿತ್ತು. ಇದೀಗ ರಸ್ತೆಯಲ್ಲಿ ಬೃಹತ್ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭಗೊಂಡಿದ್ದು, ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಗೆ ಚೆರ್ಕಳದಿಂದ ಉಕ್ಕಿನಡ್ಕವರೆಗೆ ಕೊನೆಗೂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮಳೆಗಾಲದಲ್ಲಿ ಎಡನೀರು, ನೆಕ್ರಾಜೆ, ಕರಿಂಬಿಲ, ಪಳ್ಳತ್ತಡ್ಕದಲ್ಲಿ ಉಂಟಾಗಿರುವ ಬೃಹತ್ ಹೊಂಡಗಳನ್ನು ಕಾಂಕ್ರೀಟ್ ಮಿಶ್ರಣದೊಂದಿಗೆ ಮುಚ್ಚಿ, ಚರಂಡಿ ವ್ಯವಸ್ಥೆ ಸರಿಪಡಿಸಿ, ಮಳೆ ಕಡಿಮೆಯಾದ ನಂತರ ಡಾಂಬರೀಕರಣ ಕಾರ್ಯ ನಡೆಸುವುದು ಅಧಿಕಾರಿಗಳ ಉದ್ದೇಶವಾಗಿದೆ.
ಕಾಸರಗೋಡಿನಿಂದ ಚೆರ್ಕಳ-ಬದಿಯಡ್ಕ-ಪೆರ್ಲ ಹಾದಿಯಾಗಿ ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಹದಗೆಟ್ಟು ಹಲವು ವರ್ಷಗಳೇ ಸಂದಿದೆ. ಉಕ್ಕಿನಡ್ಕ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳ್ಳಬಹುದೆಂಬ ಆಶಾಭಾವನೆ ಚಾಲಕರು ಹಾಗೂ ಪ್ರಯಾಣಿಕರದ್ದು.
ಚೆರ್ಕಳ-ಕಲ್ಲಡ್ಕ ರಸ್ತೆ ಉಕ್ಕಿನಡ್ಕವರೆಗೆ ತೀರಾ ನಾದುರಸ್ತಿಯಲ್ಲಿರುವ ಬಗ್ಗೆ ‘ವಿಜಯವಾಣಿ’ ಸಮಗ್ರ ವರದಿ ಪ್ರಕಟಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಸೆಳೆದಿತ್ತು.