ಪಲ್ಲಮಜಲು ಪ್ರದೇಶದಲ್ಲಿರುವ ಕಲ್ಲುಕ್ವಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತನಿಖಾ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.  
ಉಡುಪಿ

ಪಲ್ಲಮಜಲು ಕಲ್ಲಿನ ಕ್ವಾರಿ ಪರಿಶೀಲನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪಲ್ಲಮಜಲು ಪ್ರದೇಶದಲ್ಲಿರುವ ಕಲ್ಲಿನ ಕ್ವಾರಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತನಿಖಾ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹೋರಾಟಗಾರರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಪರಿಶೀಲನೆ ನಡೆದಿದ್ದು, ಸ್ಥಳದಲ್ಲಿ ಗ್ರಾಮಸ್ಥರು ಮತ್ತು ಹೋರಾಟಗಾರರಿಂದ ಅಧಿಕಾರಿಗಳಿಗೆ ಹಲವು ಅಹವಾಲು ಸಲ್ಲಿಸಲಾಯಿತು.
ಕಲ್ಲು ಸಿಡಿಸಲು ಅಗತ್ಯ ಅನುಮತಿ ಇಲ್ಲದಿದ್ದರೂ ಕೆಲವು ವರ್ಷಗಳಿಂದ ಸ್ಫೋಟಕ ಬಳಸಿ ಕಲ್ಲು ಒಡೆದು ಸಾಗಾಟ ನಡೆಸಲಾಗುತ್ತಿದೆ ಎಂಬ ಆರೋಪವನ್ನು ಹೋರಾಟಗಾರರು ಗಣಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಇಲಾಖೆಯ ಅಧಿಕಾರಿ ದಿಲೀಪ್ ಕುಮಾರ್ ಅವರ ನಿರ್ದೇಶನದಂತೆ ಅಧಿಕಾರಿಗಳಾದ ಪವನ್ ಹಾಗೂ ಮಾದೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ಹೋರಾಟಗಾರರು ಹಾಗೂ ಗ್ರಾಮಸ್ಥರು ಕಲ್ಲುಕ್ವಾರಿಯಿಂದ ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಅಧಿಕಾರಿಗಳು ಸ್ಥಳ ಪರಿಶೀಲನೆಯ ವಿವರಗಳನ್ನು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದು, ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.