ಉಡುಪಿಯ ಟಿ.ಎ. ಪೈ ಮೋಡರ್ನ್ ಶಾಲೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಎಂ.ವಿಶ್ವನಾಥ್ ಭಟ್, ಎಚ್.ಆರ್. ಶೆಣೈ, ಮೋಹನ್ ಶೆಟ್ಟಿ, ಯು. ಕಲ್ಯಾಣಿ ಪೈ, ಸುಲೋಚನಾ, ಶಿವಪ್ರಸಾದ್ ಇದ್ದರು.
* ವಿದ್ಯಾರ್ಥಿಗಳಿಗೆ ಎಂ.ವಿಶ್ವನಾಥ್ ಭಟ್ ಕರೆ
* ಮಕ್ಕಳಿಗೆ 'ಪರಿಸರ ಪ್ರಜ್ಞೆ' ಚಿತ್ರಕಲಾ ಸ್ಪರ್ಧೆ
ಉಡುಪಿ: ಜನ್ಮ ನೀಡಿದ ಜನನಿ, ಜನಕ ಮತ್ತು ವಿದ್ಯೆ ನೀಡಿದ ಆಚಾರ್ಯ ಈ ತ್ರಯರ ಋಣದೊಂದಿಗೆ ಮಾತೃ ಶಾಲೆಯ ಋಣವೂ ನಿಮ್ಮ ಮೇಲಿದೆ. ಚೆನ್ನಾಗಿ ಕಲಿತು, ಉನ್ನತ ಹುದ್ದೆ ಗಳಿಸಿ ಆರ್ಥಿಕವಾಗಿ ಸಬಲರಾದ ಬಳಿಕ ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಂ.ವಿಶ್ವನಾಥ್ ಭಟ್ ಕರೆ ನೀಡಿದರು.
ಉಡುಪಿಯ ಕಾಡಬೆಟ್ಟುನಲ್ಲಿರುವ ಟಿ.ಎ. ಪೈ ಮೋಡರ್ನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶತಮಾನೋತ್ಸವ ಸಮಿತಿಯ ವತಿಯಿಂದ ಆಯ್ದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಪರಿಸರ ಪ್ರಜ್ಞೆ' ವಿಷಯದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದರು.
ಬಹುಮಾನ ವಿತರಣೆ
ಸಂತ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ಗುಡಿ ಪ್ರಥಮ, ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ಭವ್ಯಶ್ರೀ ದ್ವಿತೀಯ, ಬೈಲೂರು ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ಪ್ರಣವ್ ರಾವ್ ತೃತೀಯ ಸ್ಥಾನ ಗಳಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪ ಕಾರ್ಯದರ್ಶಿ ಯು. ಕಲ್ಯಾಣಿ ಪೈ, ಮುಖ್ಯ ಶಿಕ್ಷಕಿ ಸುಲೋಚನಾ, ಟ್ರಸ್ಟಿ ಶಿವಪ್ರಸಾದ್, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯೆ ಅನಿತಾ ಆರ್., ಜಯಂತಿ ಸುಭಾಷ್ ಉಪಸ್ಥಿತರಿದ್ದರು. ಶಾಲೆಯ ಎಲ್ಲ ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶೆಟ್ಟಿ ವಂದಿಸಿದರು.
"
ಮಕ್ಕಳು ಇಲ್ಲಿ ಕಲಿತು ವಿದ್ಯಾವಂತರಾಗಿ ಮುಂದೆ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ತಾವುಗಳು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಕಲಿತ ಶಾಲೆಯ ಸಂಪರ್ಕ ಕಳೆದುಕೊಳ್ಳಬಾರದು. ನಿರಂತರ ಸಂಪರ್ಕವೇ ಶಾಲೆ ಹಾಗೂ ವಿದ್ಯಾರ್ಥಿಗಳ ನಡುವಿನ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
— ಎಚ್.ಆರ್. ಶೆಣೈ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ.