ಉಡುಪಿ: ದೇಶದ ಗಮನ ಸೆಳೆಯುವ ಮಣಿಪಾಲದ ಪಕ್ಕದಲ್ಲೇ ಇರುವ ಸರಳೆಬೆಟ್ಟು ಮತ್ತು ಶೆಟ್ಟಿಬೆಟ್ಟು ವಾರ್ಡ್ನ ಮಧ್ಯದಲ್ಲಿರುವ ಪಡುಪಾಲೆ ಗ್ರಾಮದ ರಸ್ತೆಯ ಪಾಡು ಹೇಳತೀರದು. ಈ ಮಾರ್ಗ ಡಾಂಬರ್ ಕಾಣದೆ ದಶಕಗಳೇ ಉರುಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಪಡುಪಾಲೆ ಸಂಪರ್ಕಿಸುವ ಈ ಮಾರ್ಗದಲ್ಲಿ ಸುಮಾರು ಒಂದೂವರೆ ಕಿಮೀಯಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೊಂಡಗಳಿಂದಲೇ ಭರ್ತಿಯಾದ ಈ ರೋಡ್ನಲ್ಲಿ ಸುಗಮ ಸಂಚಾರಕ್ಕೆ ತೀವ್ರ ತೊಡಕಾಗಿದೆ.
400ಕ್ಕೂ ಹೆಚ್ಚು ಮನೆ
ಈ ಮಾರ್ಗದಲ್ಲಿ 400ಕ್ಕೂ ಅಧಿಕ ಮನೆ, ವಸತಿ ಸಮುಚ್ಚಯಗಳಿವೆ. ಹೀಗಾಗಿ ಇದು ಪ್ರಮುಖ ಮಾರ್ಗವೂ ಆಗಿದೆ. ಸ್ವರ್ಣ ನದಿ ಕೋಡಿ ಭಾಗದ ಬಬ್ಬುಸ್ವಾಮಿ ಲೇಔಟ್ ಸಹ ಇಲ್ಲಿದೆ. ಇಲ್ಲಿ ಹಿಂದುಳಿದ ವರ್ಗದ ಜನಾಂಗದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದಾರೆ. ಮಳೆಗಾಲದ ಆರಂಭದಲ್ಲಿ ಬಿದ್ದ ಮಳೆಯಿಂದಾಗಿ ಈ ರಸ್ತೆ ಇನ್ನಷ್ಟು ಹಾನಿಗೊಂಡಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಮಾತ್ರ ಡಾಂಬರ್ ಗೋಚರಿಸುತ್ತಿದೆ.
ಸ್ಪಂದಿಸದ ಅಧಿಕಾರಿಗಳು
ಮಣಿಪಾಲದ ಎಂಡ್ ಪಾಯಿಂಟ್ ಮೂಲಕವೂ ಸಹ ಪಡುಪಾಲೆ ಗ್ರಾಮಕ್ಕೆ ತೆರಳಬಹುದಾಗಿದೆ. ಆದರೆ, ಅಲ್ಲಿನ ರಸ್ತೆಗೆ ಗೇಟ್ ಅಳವಡಿಸಿದ್ದರಿಂದ ಅನ್ಯ ವಾಹನಗಳ ಪ್ರವೇಶಕ್ಕೆ ಅವಕಾಶ ಇಲ್ಲದಾಗಿದೆ. ನಮ್ಮೂರಿನ ರಸ್ತೆ ಸರಿಪಡಿಸಿ ಎಂದು ಜನರು ನಗರಸಭೆಗೆ ಹಾಗೂ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರು ಇಲ್ಲ ಎನ್ನುತ್ತಾರೆ ಈ ಮಾರ್ಗದಲ್ಲಿ ಸಂಚರಿಸುವ ಪಡುಪಾಲೆಯ ನಾಗರಿಕರು.
ಪಡುಪಾಲೆ ಮಾರ್ಗದ ರಸ್ತೆ ಪೂರ್ಣ ಹಾಳಾಗಿದೆ. ಅಲ್ಲದೆ, ಕೆಲವು ಕಡೆ ಇಕ್ಕೆಲಗಳಲ್ಲಿ ರಸ್ತೆ ಅರ್ಧ ಕುಸಿದಿದೆ. ಪರಿಶಿಷ್ಟ ಜಾತಿ, ಪಂಗಡದವರ ನೂರಾರು ಮನೆಗಳಿರುವ ಕಾಲನಿಯೂ ಅಲ್ಲಿದೆ. ಹೀಗಾಗಿ ಎಸ್ಸಿ, ಎಸ್ಟಿ ಅನುದಾನವನ್ನಾದರೂ ಬಳಸಿ ಈ ರಸ್ತೆಗೆ ಡಾಂಬರ್ ಹಾಕಬೇಕು. ರಸ್ತೆಯೂ ಅತ್ಯಂತ ಕಿರಿದಾಗಿದ್ದು ಅಗಲವನ್ನೂ ತುಸು ಹೆಚ್ಚಿಸಿದರೆ ವಾಹನ ಸಂಚಾರಕ್ಕೂ ಹೆಚ್ಚು ಪ್ರಯೋಜನ ಆಗಲಿದೆ.> ಗಣೇಶ್ ರಾಜ್ ಸರಳೆಬೆಟ್ಟು. ಸಾಮಾಜಿಕ ಕಾರ್ಯಕರ್ತ.